ನವದೆಹಲಿ: ದಕ್ಷಿಣ ಏಷ್ಯಾದ ಜಲ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಕನ್ನಡಿ ಹಿಡಿಯುವಂತಹ ಬೆಳವಣಿಗೆಯಲ್ಲಿ, ಭಾರತ ಅಫ್ಘಾನಿಸ್ತಾನದ ಮಹತ್ವದ ಜಲಾಶಯ ಯೋಜನೆಗೆ ಆರ್ಥಿಕ ನೆರವು ನೀಡಲು ಸಜ್ಜಾಗಿದೆ. ಕಾಬೂಲ್ ನದಿಯ ಮೇಲಿನ ಶಾಹೂತ್ (ಲಾಲಾಂದರ್) ಜಲಾಶಯ ನಿರ್ಮಾಣಕ್ಕೆ ಭಾರತ ತನ್ನ ಬೆಂಬಲ ಘೋಷಿಸಿದ್ದು, ಇದರಿಂದ ಪಾಕಿಸ್ತಾನದಲ್ಲಿ ಗಂಭೀರ ಆತಂಕ ಮೂಡಿದೆ.
ಅಫ್ಘಾನಿಸ್ತಾನವು ಕಾಬೂಲ್ ಮತ್ತು ಕುನಾರ್ ನದಿಗಳ ಮೇಲಿನ ಡ್ಯಾಮ್ ನಿರ್ಮಾಣ ಕಾರ್ಯಕ್ಕೆ ತಯಾರಿ ನಡೆಸುತ್ತಿದೆ. ಈ ನದಿಗಳು ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವಾ ಹಾಗೂ ಪಂಜಾಬ್ ಪ್ರದೇಶಗಳಿಗೆ ಜೀವನಾಡಿಯಂತಿದ್ದು, ಕುಡಿಯುವ ನೀರು ಮತ್ತು ಕೃಷಿಗೆ ಅವಲಂಬಿತವಾಗಿವೆ. ಪ್ರತಿ ವರ್ಷ ಸುಮಾರು 17-18 ಶತಕೋಟಿ ಘನ ಮೀಟರ್ ನೀರು ಈ ನದಿಗಳ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತದೆ.
ಭಾರತದ ಈ ಹೆಜ್ಜೆಯು ಕೇವಲ ಆರ್ಥಿಕ ಸಹಕಾರವಲ್ಲ ಇದು ಪಾಕಿಸ್ತಾನದ ಮೇಲೆ ತಂತ್ರಾತ್ಮಕ ಒತ್ತಡವನ್ನು ಹೆಚ್ಚಿಸುವ ರಾಜಕೀಯ ಚಲನೆಯೂ ಹೌದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಈ ಹಿಂದೆ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಇಂಡಸ್ ವಾಟರ್ಸ್ ಟ್ರೀಟಿಯನ್ನು ಪುನರ್‌ಪರಿಶೀಲಿಸಲು ಮುಂದಾಗಿದ್ದು ಈಗ ಅದು ಮತ್ತೊಮ್ಮೆ ಜಲದ ಮಾದ್ಯಮದಲ್ಲಿ ತನ್ನ ಪಾರಂಪರಿಕ ಶತ್ರುವಿಗೆ ಸಂಕೇತ ನೀಡುತ್ತಿದೆ.
ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಯಾವುದೇ ನದಿಯ ನೀರಿನ ಹಂಚಿಕೆ ಒಪ್ಪಂದವಿಲ್ಲ ಎಂಬುದು ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ. ಇತ್ತ, ಭಾರತವು ಪಾಕಿಸ್ತಾನದೊಂದಿಗೆ ವ್ಯಾಪಾರ ಸಂಬಂಧ ಕಡಿತಗೊಳಿಸಿ, ಅಫ್ಘಾನಿಸ್ತಾನದೊಂದಿಗೆ ಸಹಕಾರವನ್ನು ಬಲಪಡಿಸುತ್ತಿರುವುದೂ ಗಮನಾರ್ಹ.
ಈ ಸಂಪೂರ್ಣ ಬೆಳವಣಿಗೆ ದಕ್ಷಿಣ ಏಷ್ಯಾದ ರಾಜಕೀಯ ಸಮೀಕರಣ ಹಾಗೂ ಜಲ ಸಂಪನ್ಮೂಲ ವಾಸ್ತವಿಕತೆಗೆ ಹೊಸ ತಿರುವು ನೀಡಲಿದ್ದು, ಮುಂದಿನ ದಿನಗಳಲ್ಲಿ ಇದರಿಂದ ಉಂಟಾಗಬಹುದಾದ ಪರಿಣಾಮದೆಡೆಗೆ ಎಲ್ಲರ ಕಣ್ಣುಗಳು ನೆಟ್ಟಿವೆ.








