ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಪತ್ತೆಯಾದ ಡ್ರಗ್ಸ್ ಜಾಲದ ಹಿಂದೆ ಸ್ಯಾಂಡಲ್ ವುಡ್ನ ಖ್ಯಾತನಾಮ ನಟ-ನಟಿಯರು ದಾಸರಾಗಿರುವ ಸ್ಫೋಟಕ ಸಂಗತಿಯನ್ನು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಸ್ಟಾರ್ ನಟರೊಬ್ಬರ ಶವದ ಮರಣೋತ್ತರ ಪರೀಕ್ಷೆ ಯಾಕೆ ನಡೆಸಲಿಲ್ಲ. ಪೋಸ್ಟ್ ಮಾರ್ಟಂ ನಡೆಸದಂತೆ ಒತ್ತಡ ಹೇರಿದವರು ಯಾರು, ಯಾವ ರಾಜಕಾರಣಿಗಳಿಂದ ಕರೆ ಬಂದಿತ್ತು ಎಂಬುದರ ಬಗ್ಗೆ ಪೊಲೀಸರು ಬಹಿರಂಗಪಡಿಸಬೇಕು ಎಂದು ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದಾರೆ.
ಶೂಟಿಂಗ್ನಲ್ಲಿ ಭಾಗಿಯಾಗುವ ಸ್ಟಾರ್ ನಟರು ಡ್ರಗ್ಸ್ ಸೇವಿಸಿಯೇ ಬರುತ್ತಾರೆ. ಶೂಟಿಂಗ್ನಲ್ಲಿ ಸರಿಯಾಗಿ ಸ್ಪಂದಿಸದೇ ನಿರ್ದೇಶಕರು ಹಾಗೂ ನಿರ್ಮಾಪಕರ ಮೇಲೆ ದರ್ಪ ಮಾಡುತ್ತಾರೆ. ರಾತ್ರಿಯಾದರೆ ಸಾಕು ರೇವ್ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಗಾಂಜಾ, ಅಫೀಮು ಸೇವಿಸಿ ಈ ಜಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಒಂದೆರಡು ಸಿನಿಮಾ ಮಾಡಿದ ನಟ-ನಟಿಯರಿಗೆ ರಾತ್ರೋರಾತ್ರಿ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಕಾರುಗಳು, ಮನೆ, ಅಪಾರ್ಟ್ಮೆಂಟ್ಗಳು ಉಡುಗೊರೆಯಾಗಿ ಸಿಗುತ್ತವೆ. ಇದೆಲ್ಲಾ ಹೇಗೆ ಸಾಧ್ಯ ಎಂದಿದ್ದಾರೆ.
ಕೆಲ ಸ್ಟಾರ್ ನಟಿಯರು ಗಾಂಜಾ, ಡ್ರಗ್ಸ್ ದಾಸರಾಗಿದ್ದಾರೆ. ಚಿತ್ರದಲ್ಲಿ ಅವಕಾಶಕ್ಕಾಗಿ ಈ ಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದು, ಹನಿಟ್ರ್ಯಾಪ್ ದಂಧೆಗೂ ಕೈಜೋಡಿಸಿದ್ದಾರೆ. ಇಂತಹವ ಹೆಸರುಗಳನ್ನು ಬಹಿರಂಗವಾಗಿ ಘೋಷಣೆ ಮಾಡಿ ಅವರ ವಿಚಾರಣೆ ನಡೆಸಬೇಕು ಎಂದು ಇಂದ್ರಜಿತ್ ಮನವಿ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ ಅಪಘಾತದ ವೇಳೆ ನಟರೊಬ್ಬರ ಕಾರಿನಲ್ಲಿ ಗಾಂಜಾ, ಡ್ರಗ್ಸ್ ಪತ್ತೆಯಾಗಿತ್ತು. ಮುಂದೆ ಇದನ್ನು ಪೊಲೀಸರು ಬಹಿರಂಗ ಪಡಿಸಲಿಲ್ಲ ಏಕೆ ಎಂದು ಪ್ರಶ್ನಿಸಿರುವ ಇಂದ್ರಜಿತ್, ಕನ್ನಡದ ಸ್ಟಾರ್ ನಟರೊಬ್ಬರು, ಖ್ಯಾತ ಪತ್ರಕರ್ತರೊಬ್ಬರ ಸಂಬಂಧಿ ಸ್ಟಾರ್ ನಟ, ಹಿರಿಯ ನಟ ನಿರ್ದೇಶಕರ ಮಗ-ಮಗಳು, ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಮಕ್ಕಳು ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಕೆಲ ಸ್ಟಾರ್ ನಟರ ಮನೆ ಹಾಗೂ ಫಾರ್ಮ್ಹೌಸ್ಗಳಿಗೆ ಡ್ರಗ್ಸ್ ತಲುಪುತ್ತದೆ. ಹೀಗಾಗಿ ಈ ಜಾಲದಲ್ಲಿ ಇರುವ ನಟ-ನಟಿಯರು, ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಸಿನಿಮಾ ಈವೆಂಟ್ ಆಯೋಜಕರು, ಕೋಆರ್ಡಿನೇಟರ್ ಗಳು ಭಾಗಿಯಾಗಿದ್ದು, ಅವರ ಹೆಸರು ಬಹಿರಂಗಪಡಿಸಬೇಕು ಎಂದು ಇಂದ್ರಜಿತ್ ಲಂಕೇಶ್ ಪೊಲೀಸರನ್ನು ಒತ್ತಾಯಿಸಿದ್ದಾರೆ.