ಬೆಂಗಳೂರು : ಸರ್ಕಾರವೇ ಈ ಹಿಂದೆ ರಾಮನಗರಕ್ಕೆ ಕೊರೊನಾ ತಂದಿಟ್ಟಿತ್ತು, ಈಗ ಮಂಡ್ಯಕ್ಕೂ ತಂದಿದ್ದು ಇದರ ಹಿಂದೆ ರಾಜಕೀಯ ಶಂಕೆ ಇದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯಕ್ಕೆ ತಂದಿದ್ದ ಮೃತ ವ್ಯಕ್ತಿಯ ಜೊತೆ ಬಂದವರಲ್ಲಿ 5 ಮಂದಿಗೆ ಪಾಸಿಟಿವ್ ಇತ್ತು. ಮಂಡ್ಯ ಜಿಲ್ಲೆಗೆ ಮುಂಬೈನಿಂದ ಸುಮಾರು 7 ರಿಂದ 8 ಸಾವಿರ ಮಂದಿ ಬಂದಿದ್ದಾರೆ. ಅವರನ್ನು ಸರಿಯಾದ ರೀತಿಯಲ್ಲಿ ಕ್ವಾರಂಟೈನ್ ಮಾಡಿಲ್ಲ. ಇಲ್ಲಿನ ಜನರು ಸಂಕಷ್ಟಕ್ಕೆ ಸಿಲುಕುವ ದಿನಗಳು ಬರಲಿವೆ. ಮೃತರು ಕೊರೊನಾದಿಂದ ಸತ್ತಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ ನಕಲಿ ದಾಖಲೆ ಸೃಷ್ಟಿಸಿ ಮೃತದೇಹ ತಂದಿದ್ದಾರೆ. ಸರ್ಕಾರ ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.