ಗಾಯದ ನೆಪದಲ್ಲಿ ಶುಬ್ಮನ್ ಗಿಲ್ ಇಂಗ್ಲೆಂಡ್ ಸರಣಿಯಿಂದ ಔಟ್.. ?
ಟೀಮ್ ಇಂಡಿಯಾ ಟೆಸ್ಟ್ ತಂಡದ ಆರಂಭಿಕ ಶುಬ್ಮನ್ ಗಿಲ್ ಅವರು ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ತಿಂಗಳಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ವಂಚಿತರಾಗುವುದು ಬಹುತೇಕ ಖಚಿತವಾಗಿದೆ.
ಈ ನಡುವೆ ಶುಬ್ಮನ್ ಗಿಲ್ ಅವರ ಗಾಯದ ಸ್ವರೂಪ ಏನು ಎಂಬುದು ಕೂಡ ಗೊತ್ತಾಗಿಲ್ಲ. ಗಿಲ್ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆಯೋ ಎಂಬುದು ಸಹ ತಿಳಿದು ಬಂದಿಲ್ಲ. ಒಂದು ಮೂಲದ ಪ್ರಕಾರ ಶುಬ್ಮನ್ ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ತಂಡದ ಫಿಸಿಯೋ ನಿತಿನ್ ಪಟೇಲ್ ಮತ್ತು ಕಂಡೀಷನಿಂಗ್ ಕೋಚ್ ಸೊಹೂಮ್ ದೇಸಾಯಿ ಅವರು ಶುಬ್ಮನ್ ಗಿಲ್ ಅವರ ಗಾಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ.
ಈ ನಡುವೆ ಶುಬ್ಮನ್ ಗಿಲ್ ಅವರು ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ವಂಚಿತರಾದ್ರೆ, ಪಶ್ಚಿಮ ಬಂಗಾಳದ ಅಪಾಯಕಾರಿ ಬ್ಯಾಟ್ಸ್ ಮೆನ್ ಅಭಿಮನ್ಯು ಈಶ್ವರನ್ ಅವರು ಟೀಮ್ ಇಂಡಿಯಾವನ್ನು ಸೇರಿಕೊಳ್ಳಬಹುದು. ಅಭಿಮನ್ಯು ಈಶ್ವರನ್ ಅವರು ದೇಶಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಕೂಡ ಸೆಳೆಯುತ್ತಿದ್ದರು.
ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 4ರಿಂದ ಆರಂಭವಾಗಲಿದೆ.
ಅಂದ ಹಾಗೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಶುಬ್ಮನ್ ಗಿಲ್ ಅವರಿಗೆ ಹೆಚ್ಚು ಮಹತ್ವದ್ದಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಗಿಲ್ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಆಡಿರುವ ಏಳು ಟೆಸ್ಟ್ ಪಂದ್ಯಗಳಲ್ಲಿ ಎರಡು ಇನಿಂಗ್ಸ್ ಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಇನ್ನುಳಿದಂತೆ ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ.
ಇದೀಗ ಗಾಯದ ನೆಪವೊಡ್ಡಿ ಶುಬ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರವನ್ನು ಟೀಮ್ ಮ್ಯಾನೇಜ್ ಮೆಂಟ್ ತೆಗೆದುಕೊಂಡಿದೆಯಾ ಅನ್ನೋ ಅನುಮಾನ ಕಾಡುತ್ತಿದೆ.