ಬೆಂಗಳೂರು ನಗರದ ಖಾಸಗಿ ಶಾಲೆಗಳಲ್ಲಿನ ಬಡ್ಡಿ ದಂಧೆ ಕುರಿತು ವರದಿಗಳು ಹೊರಬಿದ್ದಿವೆ. ಯಲಹಂಕದ ವಿಬ್ಗಯಾರ್ ಶಾಲೆಯ ಆಡಳಿತ ಮಂಡಳಿಯ ವಿರುದ್ಧ, ತಡವಾಗಿ ಶುಲ್ಕ ಪಾವತಿಸಿದ ಪೋಷಕರಿಂದ ಶೇ.3ರಷ್ಟು ಬಡ್ಡಿ ವಸೂಲಿ ಮಾಡುವ ಆರೋಪ ಕೇಳಿಬಂದಿದೆ. ಈ ಕುರಿತು ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಬಡ್ಡಿಯ ಪ್ರಮಾಣ:ಪೋಷಕರು ತಡವಾಗಿ ಶುಲ್ಕ ಪಾವತಿಸಿದರೆ, ಪ್ರತಿಮಾಸಕ್ಕೆ ಶೇ.3ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಉದಾಹರಣೆಗೆ, 25,450 ರೂ. ಶುಲ್ಕಕ್ಕೆ 5,344 ರೂ. ಬಡ್ಡಿ, 3,054 ರೂ. ಮತ್ತು 763 ರೂ. ಬಡ್ಡಿ ವಿಧಿಸಲಾಗಿದೆ.
ಶಾಲೆಯ ಆಡಳಿತ ಮಂಡಳಿ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಪೋಷಕರು, ಶಾಲಾ ಶುಲ್ಕಕ್ಕೆ ಬಡ್ಡಿ ವಿಧಿಸುವ ನಿಯಮ ಯಾವ ಕಾನೂನಲ್ಲಿದೆ ಎಂದು ಕೇಳಿದಾಗ, ಶಾಲೆಯವರು ಇದಕ್ಕೆ ಸಂಬಂಧಿಸಿದಂತೆ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ.
ಪೋಷಕರು, ಶಾಲೆಯ ಈ ಕ್ರಮವನ್ನು ಖಂಡಿಸುತ್ತಿದ್ದಾರೆ ಮತ್ತು ಶಿಕ್ಷಣದ ಹೆಸರಲ್ಲಿ ಬಡ್ಡಿ ದಂಧೆ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅವರು ಸರ್ಕಾರದಿಂದ ಈ ಪ್ರಕರಣವನ್ನು ಪರಿಶೀಲಿಸಲು ಮತ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಜೊತೆಗೆ ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ತಡವಾಗಿದ್ದಕ್ಕೆ ಶೈಕ್ಷಣಿಕ ವರ್ಷದ ಹೋಮ್ ವರ್ಕ್ ಮೆಸೇಜ್ ಗಳನ್ನು ಕೂಡ ಆಡಳಿತ ಮಂಡಳಿ ಬ್ಲಾಕ್ ಮಾಡಿದ್ಯಂತೆ. ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಕ್ಸಾಂ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ಬೆದರಿಕೆ ಹಾಕಿದ್ದು, ಇದಕ್ಕೆ ಪೋಷಕರು ಕೆಂಡಾಮಮಡಲರಾಗಿದ್ದಾರೆ.








