ಡಾಕಾ: ಬಾಂಗ್ಲಾದೇಶದ (Bangladesh) ಪ್ರಧಾನಿಯಾಗಿದ್ದ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮಧ್ಯಂತರ ಸರ್ಕಾರ ರಚನೆಯಾಗಿದೆ.
ಅಲ್ಲಿ ನೊಬೆಲ್ ಪುರಸ್ಕೃತ ಮಹಮ್ಮದ್ ಯೂನುಸ್ (84) (Muhammad Yunus) ನೇತೃತ್ವದಲ್ಲಿ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಢಾಕಾದಲ್ಲಿ ಬಾಂಗ್ಲಾದ ಮುಖ್ಯಸ್ಥರಾಗಿ ಪ್ರೊ.ಮೊಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಲ್ಲದೇ, 15 ಜನ ಸದಸ್ಯರ ಸಲಹಾ ಮಂಡಳಿಯೂ ಅಸ್ತಿತ್ವಕ್ಕೆ ಬಂದಿದೆ.
ಈ ಸಂದರ್ಭದಲ್ಲಿ ಬಿಎನ್ಪಿ ನಾಯಕಿ ಖಲಿದಾ ಜಿಯಾ, ಜಮಾತ್ ಎ ಇಸ್ಲಾಮಿ ನಾಯಕರು ಸಾಕ್ಷಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಸೇನಾ ಮುಖ್ಯಸ್ಥರ ನಿಗಾದಲ್ಲಿಯೇ ನಡೆದಿದೆ ಎನ್ನುವುದು ಗಮನಾರ್ಹ. ಆದರೆ, ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಮುಂದಿನ ನಡೆ ಏನು ಎಂಬುವುದು ಮಾತ್ರ ಇದುವರೆಗೂ ಖಚಿತವಾಗಿಲ್ಲ.
ಮಹಮ್ಮದ್ ಯೂನಸ್ ಒಬ್ಬ ಸಾಮಾಜಿಕ ಹೋರಾಟಗಾರ ಹಾಗೂ ಅರ್ಥ ಶಾಸ್ತ್ರಜ್ಞ ಆಗಿ ಗುರುತಿಸಿಕೊಂಡಿದ್ದಾರೆ. ಜನರಿಗೆ ಕಿರುಸಾಲ ನೀಡಲು ಗ್ರಾಮೀಣ ಬ್ಯಾಂಕ್ ಆರಂಭಿಸಿದ್ದರು. ಬಡವರ ಬ್ಯಾಂಕರ್ ಎಂದು ಪ್ರಸಿದ್ಧರಾಗಿದ್ದ ಇವರಿಗೆ 2006ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇವರನ್ನು ಶೇಖ್ ಹಸೀನಾ ಸರ್ಕಾರ ಕಡು ಟೀಕಾಕಾರ ಎಂದೇ ಗುರುತಿಸಲಾಗಿತ್ತು.
ಸದ್ಯ ಬಾಂಗ್ಲಾದಲ್ಲಿ ಢಾಕಾ ಸೇರಿದಂತೆ ದೇಶದ ವಿವಿಧೆಡೆ ಹಾಡಹಗಲೇ ಕಳ್ಳತನ ಶುರುವಾಗಿವೆ. ಹಿಂದೂಗಳ ಮೇಲೆ ದಾಳಿಗಳು ಮುಂದುವರೆದಿವೆ. ಹೀಗಾಗಿ ಸಾವಿರಾರು ನಾಗರಿಕರು ಆತಂಕದಲ್ಲಿದ್ದು, ದೇಶ ತೊರೆಯಲು ನೋಡುತ್ತಿದ್ದಾರೆ. ಈಗಾಗಲೇ ಹಿಂದೂಗಳೂ ಸೇರಿ ಸಾವಿರಾರು ಜನ ಭಾರತದ ಗಡಿಗೆ ಆಗಮಿಸಿದ್ದಾರೆ.
ಆದರೆ ಭದ್ರತಾ ಪಡೆಗಳು ಇದಕ್ಕೆ ಅವಕಾಶ ನೀಡಿಲ್ಲ. ಬಲವಂತವಾಗಿ ಒಳನುಗ್ಗಲು ಯತ್ನಿಸಿದರೆ ಗುಂಡು ಹಾರಿಸಬೇಕಾಗುತ್ತದೆ ಎಂದು ಭದ್ರತಾ ಪಡೆಗಳು ಎಚ್ಚರಿಕೆ ನೀಡಿವೆ.