ಚಿಕ್ಕಬಳ್ಳಾಪುರ: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈಗ ಸ್ವಪಕ್ಷೀಯರೇ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿರುವುದು ಜಿಲ್ಲಾ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಆದರೆ ಈ ಬೆಳವಣಿಗೆಯಿಂದ ಎದೆಗುಂದದ ಪ್ರದೀಪ್ ಈಶ್ವರ್, ಇದು ನನ್ನ ಬೆಳವಣಿಗೆ ಸಹಿಸಲಾಗದವರು ಮಾಡುತ್ತಿರುವ ವ್ಯವಸ್ಥಿತ ಸಂಚು ಎಂದು ತಿರುಗೇಟು ನೀಡಿದ್ದಾರೆ.
ಪ್ರದೀಪ್ ಈಶ್ವರ್ ಗೆ ಟಿಕೆಟ್ ನೀಡಬೇಡಿ ಎಂದು ಮುಖಂಡರ ಪಟ್ಟು
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದಿನದಿಂದ ದಿನಕ್ಕೆ ಹಳ್ಳ ಹಿಡಿಯುತ್ತಿದೆ ಎಂದು ಆರೋಪಿಸಿರುವ ಸ್ಥಳೀಯ ಕಾಂಗ್ರೆಸ್ ನಾಯಕರು, ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಬಾರದು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಶಾಸಕರ ದುರ್ವರ್ತನೆ ಮತ್ತು ಕಾರ್ಯಕರ್ತರ ಕಡೆಗಣನೆಯಿಂದಾಗಿ ನಗರಸಭೆಯ 18 ಸದಸ್ಯರ ಪೈಕಿ ಹಲವರು ಈಗಾಗಲೇ ಮಾಜಿ ಸಚಿವ ಡಾ ಕೆ ಸುಧಾಕರ್ ಅವರ ಜೊತೆ ಕೈಜೋಡಿಸಿದ್ದಾರೆ. ಇತ್ತೀಚೆಗೆ ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲೂ ಕಾಂಗ್ರೆಸ್ ಅನುಭವಿಸಿದ ಮುಖಭಂಗಕ್ಕೆ ಶಾಸಕರ ಏಕಪಕ್ಷೀಯ ಧೋರಣೆಯೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಾನು ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸಲೂ ಸಿದ್ಧ
ತಮ್ಮ ವಿರುದ್ಧ ದೂರು ಹೋದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರದೀಪ್ ಈಶ್ವರ್, ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನನಗೆ ನನ್ನ ಪಕ್ಷವೇ ಮುಖ್ಯ ಮತ್ತು ಪಕ್ಷದ ಭವಿಷ್ಯವೇ ಮುಖ್ಯ. ಪಕ್ಷದ ಕಚೇರಿಯಲ್ಲಿ ಕಸ ಗುಡಿಸಲು ನಾನು ಸಿದ್ಧನಿದ್ದೇನೆ. 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಮತ್ತು 2029ಕ್ಕೆ ರಾಹುಲ್ ಗಾಂಧಿ ಅವರು ದೇಶದ ಪ್ರಧಾನಿಯಾಗಬೇಕು ಎನ್ನುವುದೇ ನನ್ನ ಏಕೈಕ ಗುರಿ ಎಂದು ಹೇಳಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳೋಣ ಎಂದು ಅವರು ಮನವಿ ಮಾಡಿದ್ದಾರೆ.
ದೂರು ನೀಡಿದವರೇ ಬಿಜೆಪಿಗೆ ವೋಟ್ ಹಾಕಿದವರು ಶಾಸಕರ ಆರೋಪ
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ತಮ್ಮ ವಿರುದ್ಧ ದೂರು ನೀಡಿದವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಹಿಂದೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿ ಫಾರಂ ಪಡೆದು ಗೆದ್ದು, ಬಳಿಕ ಬಿಜೆಪಿಗೆ ಮತ ಹಾಕಿದವರೇ ಇಂದು ನನ್ನ ವಿರುದ್ಧ ದೂರು ನೀಡಲು ಬೆಂಗಳೂರಿಗೆ ಹೋಗಿದ್ದಾರೆ ಎಂದು ಅವರು ಕುಟುಕಿದ್ದಾರೆ. ಶಾಸಕರು ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿರುವ ಅವರು, ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಸ್ವಪಕ್ಷೀಯರೇ ತಮ್ಮ ಕಾಲನ್ನು ಎಳೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೈ ಪಾಳಯದ ಒಳಜಗಳ ಬೀದಿಗೆ ಬಂದಿದ್ದರಿಂದ ಹೈಕಮಾಂಡ್ ಗೆ ತಲೆನೋವು
ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರು ಪ್ರದೀಪ್ ಈಶ್ವರ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು. ಆದರೆ ಈಗ ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಶಾಸಕರ ನಡವಳಿಕೆ ಬಗ್ಗೆ ಕೆಪಿಸಿಸಿಗೆ ದೂರು ನೀಡಿರುವುದು ಮತ್ತು ವಿಶೇಷ ವೀಕ್ಷಕರನ್ನು ನೇಮಿಸಬೇಕು ಎಂದು ಆಗ್ರಹಿಸಿರುವುದು ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟ್ರೋಲ್ ಗಳ ನಡುವೆಯೂ ಮಿಂಚುತ್ತಿದ್ದ ಪ್ರದೀಪ್ ಈಶ್ವರ್ ಅವರಿಗೆ ಈ ಬಂಡಾಯದ ಕಿಚ್ಚು ಮುಂದಿನ ದಿನಗಳಲ್ಲಿ ಯಾವ ತಿರುವು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.







