ಮೈಸೂರು: ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇಂದು ತಮ್ಮ ವಿರೋಧಿಗಳ ವಿರುದ್ಧ ಚಾಟಿ ಬೀಸಿದ್ದು, ನಟ ಪ್ರಕಾಶ್ ರಾಜ್ ಮತ್ತು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ದೇಶದ್ರೋಹಿಗಳು ಎಂದು ಕರೆದಿದ್ದ ನಟ ಪ್ರಕಾಶ್ ರಾಜ್ ಅವರಿಗೆ ಪ್ರತಾಪ್ ಸಿಂಹ ತಮ್ಮದೇ ಶೈಲಿಯಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.
ಮೋದಿಯನ್ನು ನಿಂದಿಸುವ ಪ್ರಕಾಶ್ ರಾಜ್ ಒಬ್ಬ ಹುಚ್ಚ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರನ್ನೂ ಹುಚ್ಚರು ಎಂದು ಕರೆದರು. ಪ್ರಕಾಶ್ ರಾಜ್ ಅವರು ಮೋದಿ ಅವರನ್ನು 13 ವರ್ಷಗಳಿಂದ ಬಂಧಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಂಹ, ಸಮಾಜವೇ ಹುಚ್ಚರು ಎಂದು ಯಾರನ್ನು ದೂರ ಇಟ್ಟಿದೆಯೋ ಅಂತಹವರನ್ನು ಯಾರಾದರೂ ಜೈಲಿಗೆ ಹಾಕುತ್ತಾರಾ? ಹುಚ್ಚರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಇಂತಹ ವ್ಯಕ್ತಿಗಳ ಮಾತಿಗೆ ಯಾವುದೇ ಬೆಲೆ ಇಲ್ಲ ಎಂದು ಅವರು ಲೇವಡಿ ಮಾಡಿದರು.
ಗ್ಯಾರಂಟಿ ಶಿಶು ಪ್ರದೀಪ್ ಈಶ್ವರ್ ಟಿಕೆಟ್ ಗೆ ಡಿಕೆಶಿ ಕತ್ತರಿ ಹಾಕ್ತಾರೆ
ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಗುರಿಯಾಗಿಸಿಕೊಂಡ ಪ್ರತಾಪ್ ಸಿಂಹ, ಅವರನ್ನು ಗ್ಯಾರಂಟಿ ಶಿಶು ಎಂದು ಕರೆದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಅವರು ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದರು. ಆ ಕ್ಷೇತ್ರದಲ್ಲಿ ಸ್ಪರ್ಧಿಸಲು ಬೇರೆಯವರನ್ನು ಈಗಾಗಲೇ ಆಯ್ಕೆ ಮಾಡಿ ಇಡಲಾಗಿದೆ. ಪ್ರದೀಪ್ ಈಶ್ವರ್ ಅವರು ಐದು ವರ್ಷ ಏನೇನೋ ಮಾತನಾಡಲಿ ಎಂದು ಸದ್ಯಕ್ಕೆ ಸುಮ್ಮನೆ ಬಿಡಲಾಗಿದೆ ಅಷ್ಟೇ ಎಂದು ಟಾಂಗ್ ನೀಡಿದರು.
ಪ್ರತಾಪ್ ಸಿಂಹ ಅವರ ಈ ರೌದ್ರಾವತಾರ ಮತ್ತು ವ್ಯಂಗ್ಯದ ಮಾತುಗಳು ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಸತತವಾಗಿ ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಿರುವ ಪ್ರಕಾಶ್ ರಾಜ್ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಪ್ರತಾಪ್ ಸಿಂಹ ನೀಡಿರುವ ಈ ಬೆಂಕಿ ಕೌಂಟರ್ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ವಿರೋಧಿಗಳ ವಿರುದ್ಧ ಸಿಂಹ ಅವರ ಈ ಗರ್ಜನೆಗೆ ಕಾಂಗ್ರೆಸ್ ಪಾಳಯ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.








