ಐಪಿಎಲ್ 2020- ಕೆಕೆಆರ್ ಪ್ಲೇ ಆಫ್ ಕನಸು ಭಗ್ನಗೊಳಿಸಿದ ಸಿಎಸ್ ಕೆ
ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಎಡವಿಬಿದ್ದಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬ್ರೇಕ್ ಹಾಕಿದೆ.
ಹೀಗಾಗಿ 2020ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಪ್ಲೇ ಆಫ್ ಕನಸು ಬಹುತೇಕ ಕಮರಿ ಹೋಗಿದೆ.
ರೋಚಕವಾಗಿ ಅಂತ್ಯಗೊಂಡ ಟೂರ್ನಿಯ 49ನೇ ಪಂದ್ಯದಲ್ಲಿ ಸಿಎಸ್‍ಕೆ ತಂಡ ಆರು ವಿಕೆಟ್ ಗಳಿಂದ ಕೆಕೆಆರ್ ತಂಡವನ್ನು ಪರಾಭವಗೊಳಿಸಿದೆ.
ದುಬೈ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಐದು ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತ್ತು.
ಕೆಕೆಆರ್ ತಂಡದ ಪರ ಆರಂಭಿಕ ಶುಬ್ಮನ್ ಗಿಲ್ 26 ರನ್ ಗಳಿಸಿದ್ರು. ಹಾಗೇ ರಾಣಾ ಅವರು ಮಿಂಚಿನ 87 ರನ್ ದಾಖಲಿಸಿದ್ರು. ರಾಣಾ 61 ಎಸೆತಗಳಲ್ಲಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿದ್ರು.
ಇನ್ನು ರಿಂಕ್ ಸಿಂಗ್ 11 ರನ್ ಮತ್ತು ಇಯಾನ್ ಮೊರ್ಗಾನ್ 15 ರನ್‍ಗೆ ಸೀಮಿತವಾದ್ರು.
ಕೊನೆಯಲ್ಲಿ ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 21 ರನ್ ದಾಖಲಿಸಿದ್ರು. ಸಿಎಸ್ ಕೆ ತಂಡದ ಪರ ಲುಂಗಿ ಎನ್‍ಗಿಡಿ ಅವರು ಎರಡು ವಿಕೆಟ್ ಉರುಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಸಿಎಸ್ ಕೆ ಆರಂಭದಲ್ಲೇ ಶೇನ್ ವಾಟ್ಸನ್ 14 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು. ನಂತರ ಋತುರಾಜ್ ಗಾಯಕ್ ವಾಡ್ ಮತ್ತು ಅಂಬಟಿ ರಾಯುಡು ತಂಡಕ್ಕೆ ಆಧಾರವಾಗಿ ನಿಂತ್ರು.
ಋತುರಾಜ್ ಗಾಯಕ್ ವಾಡ್ ಮನಮೋಹಕ ಆಟವನ್ನಾಡಿದ್ರು. ಶೇನ್ ವಾಟ್ಸನ್ ಜೊತೆ ಮೊದಲ ವಿಕೆಟ್‍ಗೆ 50 ರನ್ ಪೇರಿಸಿದ್ರು. ನಂತರ ಅಂಬಟಿ ರಾಯುಡು ಜೊತೆ ಸೇರಿಕೊಂಡು ಎರಡನೇ ವಿಕೆಟ್ ಗೆ 68 ರನ್ ಕಲೆ ಹಾಕಿದ್ರು.
ಋತುರಾಜ್ ಗಾಯಕ್ ವಾಡ್ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 72 ರನ್ ಗಳಿಸಿದ್ರು.
ಈ ಹಂತದಲ್ಲಿ ಅಂಬಟಿ ರಾಯುಡು 38 ರನ್ ಗಳಿಸಿ ಔಟಾದ್ರು. ನಾಯಕ ಮಹೇಂದ್ರ ಸಿಂಗ್ ಧೋನಿ 1 ರನ್ ಗೆ ಸೀಮಿತವಾದ್ರು.
ಇನ್ನೇನೂ ಕೆಕೆಆರ್ ಗೆಲುವಿನ ನಗೆ ಬೀರುತ್ತೆ ಅಂದುಕೊಂಡುವಷ್ಟರಲ್ಲಿ ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು.
ರವೀಂದ್ರ ಜಡೇಜಾ 11 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ ಅಜೇಯ 31 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ರವೀಂದ್ರ ಜಡೇಜಾ ಅವರಿಗೆ ಸಾಥ್ ನೀಡಿದ ಸ್ಯಾಮ್ ಕುರನ್ ಅಜೇಯ ಅಜೇಯ 13 ರನ್ ಗಳಿಸಿದ್ರು. ಅಂತಿಮವಾಗಿ ಸಿಎಸ್ ಕೆ ತಂಡ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 178 ರನ್ ದಾಖಲಿಸಿತು.
ಅದ್ಭುತ ಆಟವನ್ನಾಡಿದ್ದ ಋತುರಾಜ್ ಗಾಯಕ್ ವಾಡ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.
ಕೆಕೆಆರ್ ಮತ್ತು ಸಿಎಸ್ ಕೆ ತಂಡಗಳು ಟೂರ್ನಿಯಲ್ಲಿ 13 ಪಂದ್ಯಗಳನ್ನು ಆಡಿವೆ. ಸಿಎಸ್ ಕೆ ಐದು ಗೆಲುವು ಮತ್ತು ಎಂಟು ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹಾಗೇ ಕೆಕೆಆರ್ ತಂಡ 13 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಏಳು ಸೋಲುಗಳಿಂದ 12 ಅಂಕಗಳನ್ನು ಪಡೆದುಕೊಂಡು ಸದ್ಯ ಐದನೇ ಸ್ಥಾನದಲ್ಲಿದೆ.