ಐಪಿಎಲ್ 2020= ರೋಹಿತ್ ವರ್ಸಸ್ ಶಮಿ, ರಾಹುಲ್ ವರ್ಸಸ್ ಬೂಮ್ರಾ… ಗೆಲುವು ಯಾರದ್ದು ?
ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.
ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಹಾಗೇ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿವೆ.
ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಹೋರಾಟ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಲಿದೆ. ಬಲಿಷ್ಠವಾಗಿರುವ ಎರಡು ತಂಡಗಳು ಗೆಲುವಿನ ತವಕದಲ್ಲಿವೆ.
ಇನ್ನು ಉಭಯ ತಂಡಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಅನ್ನು ಹೆಚ್ಚು ನೆಚ್ಚಿಕೊಂಡಿದೆ. ಇನ್ನುಳಿದಂತೆ ಕ್ವಿಂಟನ್ ಡಿಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ನಿಂದ ಇನ್ನೂ ಕೂಡ ರನ್ ಗಳು ಹರಿದು ಬಂದಿಲ್ಲ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಹಾರ್ಧಿಕ್ ಪಾಂಡ್ಯ ಮತ್ತು ಕಿರಾನ್ ಪೋಲಾರ್ಡ್ ಆಧಾರವಾಗುತ್ತಿರುವುದು ಮುಂಬೈ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಅದೇ ರೀತಿ ಕೃನಾಲ್ ಪಾಂಡೆ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಾಹರ್, ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೌಲ್ಟ್ ಬೌಲಿಂಗ್ ಅಸ್ತ್ರಗಳಾಗಿದ್ದಾರೆ.
ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಅವರನ್ನು ಹೆಚ್ಚು ನಂಬಿಕೊಂಡಿದೆ. ಅದೇ ರೀತಿ ನಿಕೊಲಾಸ್ ಪೂರನ್, ಕರುಣ್ ನಾಯರ್, ಗ್ಲೇನ್ ಮ್ಯಾಕ್ಸ್ ವೆಲ್, ಜಿಮ್ಮಿ ನೀಶಾಮ್ ಹಾಗೂ ಸಫ್ರಾಜ್ ಖಾನ್ ಮಧ್ಯಮ ಕ್ರಮಾಂಕದ ಆಧಾರಸ್ತಂಭಗಳು. ಕೆ. ಗೌತಮ್ ಸ್ಥಾನವನ್ನು ತುಂಬಿರುವ ಮುರುಗನ್ ಅಶ್ವಿನ್, ಮಹಮ್ಮದ್ ಶಮಿ, ರವಿ ಬಿಸ್ನೋಯ್ ಶೆಲ್ಡನ್ ಕಾಟ್ರೆಲ್ ಅವರು ಕೆ.ಎಲ್. ರಾಹುಲ್ ಅವರ ಬೌಲಿಂಗ್ ವಿಭಾಗವಾಗಿದೆ.
ಮುಖ್ಯವಾಗಿ ಇಂದಿನ ಪಂದ್ಯದಲ್ಲಿ ರೋಹಿತ್ ವರ್ಸಸ್ ಮಹಮ್ಮದ್ ಶಮಿ ಹಾಗೂ ಕೆ.ಎಲ್. ರಾಹುಲ್ ವರ್ಸಸ್ ಬೂಮ್ರಾ ನಡುವೆ ಚೆಂಡು ಬ್ಯಾಟಿನ ಸಮರ ನಡೆಯಲಿದೆ.
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕಿರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟನ್ಸನ್, ರಾಹುಲ್ ಚಾಹರ್, ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೌಲ್ಟ್.
ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭವನೀಯ ತಂಡ
ಕೆ.ಎಲ್. ರಾಹುಲ್ (ನಾಯಕ) ಮಯಾಂಕ್ ಅಗರ್ ವಾಲ್, ನಿಕೊಲಾಸ್ ಪೂರನ್, ಕರುಣ್ ನಾಯರ್, ಗ್ಲೇನ್ ಮ್ಯಾಕ್ಸ್ ವೆಲ್, ಜಿಮ್ಮಿ ನಿಶಾಮ್, ಸಫ್ರಾಝ್ ಖಾನ್, ಮುರುಗನ್ ಅಶ್ವಿನ್, ರವಿ ಬಿಸ್ನೋಯ್, ಮಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್.