ಐಪಿಎಲ್ 2020- ಡೆಲ್ಲಿ ಹುಡುಗರ ಅಬ್ಬರಕ್ಕೆ ತಲ್ಲಣಗೊಂಡ ರಾಯಲ್ ಚಾಲೆಂಜರ್ಸ್
ಮಾರ್ಕಸ್ ಸ್ಟೋನಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಕಾಗಿಸೊ ರಬಾಡ ಅವರ ಅದ್ಭುತ ಬೌಲಿಂಗ್ ದಾಳಿಗೆ ಕಂಗೆಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ ಗಳಿಂದ ಸೋಲು ಅನುಭವಿಸಿತ್ತು.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರ ಲಾಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6.4 ಓವರ್ ಗಳಲ್ಲಿ ಮೊದಲ ವಿಕೆಟ್ಗೆ 68 ರನ್ ಗಳಿಸಿತು. ಪೃಥ್ವಿ ಶಾ 23 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 42 ರನ್ ಸಿಡಿಸಿದ್ರೆ, ಶಿಖರ್ ಧವನ್ ಅವರು 28 ಎಸೆತಗಳಲ್ಲಿ 32 ರನ್ ಗಳಿಸಿದ್ರು. ಹಾಗೇ ನಾಯಕ ಶ್ರೇಯಸ್ ಅಯ್ಯರ್ ಅವರು 11 ರನ್ ಗಳಿಸಿದ್ದಾಗ ದೇವದತ್ ಪಡಿಕ್ಕಲ್ ಅವರ ಅದ್ಭುತ ಕ್ಯಾಚ್ಗೆ ಬಲಿಯಾದ್ರು.
ಬಳಿಕ ರಿಷಬ್ ಪಂತ್ ಜೊತೆ ಸೇರಿಕೊಂಡ ಮಾರ್ಕಸ್ ಸ್ಟೋನಿಸ್ ಅವರು ನಾಲ್ಕನೇ ವಿಕೆಟ್ಗೆ 97 ರನ್ ಪೇರಿಸಿದ್ರು. ಈ ಹಂತದಲ್ಲಿ 37 ರನ್ ಗಳಿಸಿದ್ದ ರಿಷಬ್ ಪಂತ್ ಪೆವಿಲಿಯನ್ ಹಾದಿ ಹಿಡಿದ್ರು. ಇನ್ನೊಂದೆಡೆ ಮಾರ್ಕಸ್ ಸ್ಟೋನಿಸ್ ಅವರು ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 53 ರನ್ ಗಳಿಸಿದ್ರು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 196 ರನ್ ದಾಖಲಿಸಿತು.
ಸವಾಲನ್ನು ಬೆನ್ನಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡೆಲ್ಲಿ ಬೌಲರ್ ಗಳು ಕಂಟಕವಾಗಿ ಪರಿಣಮಿಸಿದ್ರು. ಆರಂಭಿಕ ದೇವದತ್ ಪಡಿಕ್ಕಲ್ ಅವರು 4ರನ್ಗೆ ಸೀಮಿತವಾದ್ರೆ, ಆರೋನ್ ಫಿಂಚ್ ಹೋರಾಟ 13 ರನ್ ಗೆ ಅಂತ್ಯಗೊಂಡಿತು.
ಅದೇ ರೀತಿ ಎಬಿಡಿ ವಿಲಿಯರ್ಸ್ 9 ರನ್, ಮೋಯಿನ್ ಆಲಿ 11 ಹಾಗೂ ವಾಷಿಂಗ್ಟನ್ ಸುಂದರ್ 17 ರನ್ ಮತ್ತು ಶಿವಂ ದುಬೆ 11 ರನ್, ಉದನಾ 1 ರನ್, ಮಹಮ್ಮದ್ ಸಿರಾಜ್ 5 ರನ್ ಹಾಗೂ ನವದೀಪ್ ಸೈನಿ ಅಜೇಯ 12 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಡಿಸಿ ತಂಡದ ನಿಖರ ದಾಳಿಗೆ ಕೊಹ್ಲಿ ಕೂಡ ಅಬ್ಬರ ಬ್ಯಾಟಿಂಗ್ ನಡೆಸಲು ವಿಫಲರಾದ್ರು. ಅಂತಿಮವಾಗಿ ಆರ್ಸಿಬಿ ತಂಡ 9 ವಿಕೆಟ್ಗೆ 139 ರನ್ ಗಳಿಸಿ ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಕಾಗಿಸೊ ರಬಾಡ ನಾಲ್ಕು ವಿಕೆಟ್ ಪಡೆದ್ರೆ, ಅಕ್ಷರ್ ಪಟೇಲ್ ಮತ್ತು ಆನ್ರಿಚ್ ಅವರು ತಲಾ ಎರಡು ವಿಕೆಟ್ ಪಡೆದ್ರು. ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.