ಮಹಮ್ಮದ್ ಸಿರಾಜ್.. ಕೊಹ್ಲಿ ಬತ್ತಳಿಕೆಯ ಸರ್ಪಾಸ್ತ್ರ..!
4 ಓವರ್.. 2 ಮೇಡನ್ ಓವರ್.. ಎಂಟು ರನ್.. ಮೂರು ವಿಕೆಟ್..
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಬೌಲರ್ ಒಬ್ಬ ಈ ರೀತಿಯ ಸಾಧನೆ ಮಾಡಿರೋದು.
ಹೊಡಿಬಡಿ ಆಟದಲ್ಲಿ ಬೌಲರ್ ಈ ರೀತಿಯ ಸಾಧನೆ ಮಾಡಿರುವುದು ಅದ್ಭುತವೇ ಸರಿ.
ಹೌದು, ಮಹಮ್ಮದ್ ಸಿರಾಜ್.. ಕೆಕೆಆರ್ ವಿರುದ್ಧ ಆರ್ ಸಿಬಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸುವಂತೆ ಮಾಡಿದ್ದ ಬೌಲರ್.
ಹಾಗೇ ನೋಡಿದ್ರೆ ಮಹಮ್ಮದ್ ಸಿರಾಜ್ ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಮಾಡಿರಲಿಲ್ಲ.
ಆದ್ರೆ ಕೆಕೆಆರ್ ವಿರುದ್ಧ ಅವರ ಬೌಲಿಂಗ್ ದಾಳಿ ಮಹಮ್ಮದ್ ಸಿರಾಜ್ ಮೇಲಿದ್ದ ಎಲ್ಲಾ ಟೀಕೆಗಳಿಗೆ ತಕ್ಕ ಉತ್ತರವನ್ನು ನೀಡಿತ್ತು.
ಐಪಿಎಲ್ ನಲ್ಲಿ ಮಹಮ್ಮದ್ ಸಿರಾಜ್ ಕೆಟ್ಟ ಬೌಲರ್ ಅಂತನೇ ಬಿಂಬಿಸಲಾಗುತ್ತಿತ್ತು.
92 ಬೌಲರ್ ಗಳಲ್ಲಿ ನೂರಕ್ಕಿಂತ ಹೆಚ್ಚು ಓವರ್ ಗಳನ್ನು ಎಸೆದಿರುವ ಬೌಲರ್ ಗಳ ಪೈಕಿ ಮಹಮ್ಮದ್ ಸಿರಾಜ್ ತುಂಬಾನೇ ದುಬಾರಿಯಾಗಿದ್ದರು.
ಮಹಮ್ಮದ್ ಸಿರಾಜ್ ಅವರ ಸರಾಸರಿ ಬೌಲಿಂಗ್ 9. ಆದ್ರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅವರ ಸರಾಸರಿ 2ಕ್ಕೆ ಇಳಿದಿದೆ.
ಅಂದ ಹಾಗೇ, ಮಹಮ್ಮದ್ ಸಿರಾಜ್ ಹೈದ್ರಬಾದ್ ಪ್ರತಿಭೆ.
2015ರಲ್ಲಿ ಬೆಳಕಿಗೆ ಬಂದಿರುವ ಮಹಮ್ಮದ್ ಸಿರಾಜ್ ರಣಜಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನವನ್ನೇ ನೀಡಿದ್ದರು.
ಪರಿಣಾಮ, 2017ರಲ್ಲಿ ಟೀಮ್ ಇಂಡಿಯಾದ ಟಿ-ಟ್ವೆಂಟಿಯಲ್ಲಿ ಕಾಣಿಸಿಕೊಂಡ್ರು.
ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಟಿ-ಟ್ವೆಂಟಿ ಪಂದ್ಯವನ್ನಾಡಿದ್ರು. ಹಾಗೇ 2018ರಲ್ಲಿ ಟೀಮ್ ಇಂಡಿಯಾದ ಟೆಸ್ಟ್ ತಂಡವನ್ನು ಸೇರಿಕೊಂಡ್ರು.
ವಿಂಡೀಸ್ ವಿರುದ್ಧ ಆಯ್ಕೆಯಾದ್ರೂ ಆಡುವ ಅವಕಾಶ ಸಿಗಲಿಲ್ಲ. ಆದ್ರೆ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡಿದ್ರು.
ಆದ್ರೆ ಮಹಮ್ಮದ್ ಸಿರಾಜ್ ಅವರು ಟೀಮ್ ಇಂಡಿಯಾದ ಖಾಯಂ ಆಟಗಾರನಾಗಲು ವಿಫಲರಾಗಿದ್ದರು.
ಈ ನಡುವೆ, ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಪರ ಆಡಿದ್ದರು.
ಬಳಿಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಿದ್ದಾರೆ.
ಹಾಗೇ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಮಹಮ್ಮದ್ ಸಿರಾಜ್ ಭಾರತ ಎ ತಂಡದಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು.
ಅಂದ ಹಾಗೇ ಮಹಮ್ಮದ್ ಸಿರಾಜ್ ಕಲ್ಲು ಮುಳ್ಳಿನ ಹಾದಿಯಲ್ಲಿ ಬೆಳೆದಿರುವ ಕ್ರಿಕೆಟಿಗ.
ತಂದೆ ಆಟೋ ರಿಕ್ಷಾ ಡ್ರೈವರ್. ಮಗನ ಕ್ರಿಕೆಟ್ ಆಸಕ್ತಿಗೆ ಸ್ವಲ್ಪನೂ ಅಡ್ಡಿಯನ್ನುಂಟು ಮಾಡಲಿಲ್ಲ.
ಕಷ್ಟಪಟ್ಟು ದುಡಿದು ಮಗನನ್ನು ಕ್ರಿಕೆಟಿಗನ್ನಾಗಿ ರೂಪುಗೊಳಿಸಿದ್ದರು.
2015ರಲ್ಲಿ ಹೈದ್ರಬಾದ್ ರಣಜಿ ತಂಡಕ್ಕೆ ಎಂಟ್ರಿಯಾದ ಮಹಮ್ಮದ್ ಸಿರಾಜ್ ಅದೃಷ್ಟ ಕೂಡ ಬದಲಾಗಿ ಹೋಯ್ತು. ಅದಕ್ಕೆ ಕಾರಣ ಸನ್ ರೈಸರ್ಸ್ ಹೈದ್ರಬಾದ್ ತಂಡ.
2.60 ಕೋಟಿ ರೂಪಾಯಿಗೆ ಮಹಮ್ಮದ್ ಸಿರಾಜ್ ಅವರನ್ನು ಖರೀದಿ ಎಸ್ ಆರ್ ಎಚ್ ಖರೀದಿ ಮಾಡಿತ್ತು.
ಇದು ಮಹಮ್ಮದ್ ಸಿರಾಜ್ ಅವರ ಅದೃಷ್ಟದ ಬಾಗಿಲು ಅನ್ನು ತೆರೆಯುವಂತೆ ಮಾಡಿತ್ತು.
ಐಪಿಎಲ್ ಹಣದಿಂದಲೇ ಸಿರಾಜ್ ಅವರು ಹೊಸ ಮನೆ ಕಟ್ಟಿಸಿದ್ರು. ತನ್ನ ತಂದೆ ಆಟೋ ರಿಕ್ಷಾ ಓಡಿಸಬಾರದು ಅಂತ ಮನ ಒಲಿಸಿದ್ರು.
ತನಗಾಗಿ ದುಡಿದಿದ್ದು ಸಾಕು.. ಇನ್ನೂ ಮುಂದೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಪ್ರೀತಿಯಿಂದಲೇ ಹೇಳಿದ್ರು ಮಹಮ್ಮದ್ ಸಿರಾಜ್.
ಹೊಸ ಮನೆಯ ಗೃಹ ಪ್ರವೇಶದ ವೇಳೆ ಮಹಮ್ಮದ್ ಸಿರಾಜ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು.
ಸನ್ ರೈಸರ್ಸ್ ಹೈದ್ರಬಾದ್ ತಂಡದ ಆಟಗಾರರ ಜೊತೆಗೆ ಆರ್ ಸಿಬಿ ತಂಡದ ಒಡನಾಡಿಗಳನ್ನು ಗೃಹಪ್ರವೇಶಕ್ಕೆ ಆಹ್ವಾನಿಸಿದ್ರು.
ಅದ್ರಲ್ಲೂ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಮಹಮ್ಮದ್ ಸಿರಾಜ್ ಮನೆಯ ಬಿರಿಯಾನಿ ತಿಂದು ಖುಷಿಪಟ್ಟಿದ್ದರು ಎಂಬುದೆಲ್ಲಾ ಹಳೆಯ ಸಂಗತಿ.
ಆದ್ರೆ ಯಾಕೋ ಏನೋ ಐಪಿಎಲ್ ನಲ್ಲಿ ಮಹಮ್ಮದ್ ಸಿರಾಜ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.
ಹೀಗಾಗಿ ಸಾಕಷ್ಟು ಬಾರಿ ಟೀಕೆಗೂ ಗುರಿಯಾಗಿದ್ದರು. ಟ್ರೋಲಿಗರಿಗೂ ಆಹಾರವಾಗಿದ್ದರು.
ಆದ್ರೆ ಈಗ ಒಂದೇ ಒಂದು ಪಂದ್ಯದಲ್ಲಿ ತನ್ನ ಸಾಮಥ್ರ್ಯ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ತನ್ನನ್ನು ಅಪಹಾಸ್ಯ ಮಾಡಿದವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.
ಅಷ್ಟಕ್ಕೂ ಮಹಮ್ಮದ್ ಸಿರಾಜ್ ಅವರ ಈ ಸಾಧನೆಗೆ ಪ್ರಮುಖ ಕಾರಣ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ.
ಪಂದ್ಯಕ್ಕೂ ಮುನ್ನವೇ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಸಿದ್ಧನಾಗು ಎಂಬ ಸುಳಿವನ್ನು ವಿರಾಟ್ ಕೊಹ್ಲಿ ಸಿರಾಜ್ ಗೆ ನೀಡಿದ್ದರು.
ಇದಕ್ಕಾಗಿಯೇ ನೆಟ್ಸ್ ನಲ್ಲೂ ಸಾಕಷ್ಟು ಪರಿಶ್ರಮ ಪಟ್ಟಿದ್ದರು.
ಆದ್ರೆ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಬೌನ್ಸರ್ ಹಾಕುವಂತೆ ಸಲಹೆ ನೀಡಿದ್ದರಂತೆ.
ಆದ್ರೆ ಬೌಲಿಂಗ್ ರನ್ ಅಪ್ ಮಾಡುವಾಗ ತನ್ನ ನಿಲುವನ್ನು ಬದಲಾಸಿಕೊಂಡ ಸಿರಾಜ್ ನಾಯಕನನ್ನೇ ಹುಬ್ಬೇರಿಸುವಂತೆ ಮಾಡಿದ್ದರು.
ಒಟ್ಟಿನಲ್ಲಿ ಮಹಮ್ಮದ್ ಸಿರಾಜ್ ಆರ್ ಸಿಬಿಯ ಪ್ರಮುಖ ಸರ್ಪಾಸ್ತ್ರ ಬತ್ತಳಿಕೆಯಾಗಿದ್ದಾರೆ. ಹಾಗಂತ ಇದೇ ಗುಂಗಿನಲ್ಲಿದ್ರೆ ಕಷ್ಟ..
ಸ್ಥಿರ ಪ್ರದರ್ಶನ ನೀಡಿದ್ರೆ ಟೀಮ್ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸಕ್ಕೂ ಮಹಮ್ಮದ್ ಸಿರಾಜ್ ಆಯ್ಕೆಯಾಗಬಹುದು.