ಐಪಿಎಲ್ 2021 ಭಾಗ -2 – ಜೂನ್ ಕೊನೆಯ ವಾರ ವೇಳಾಪಟ್ಟಿ ಪ್ರಕಟ..!
2021ರ ಐಪಿಎಲ್ ಟೂರ್ನಿಯ 31 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆ. ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಯನ್ನು ಮುಂದುವರಿಸಲು ಈಗಾಗಲೇ ಬಿಸಿಸಿಐ ಯುಎಇ ಕ್ರಿಕೆಟ್ ಮಂಡಳಿಯ ಜೊತೆ ಚರ್ಚೆ ನಡೆಸುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಮೊದಲಾದವರು ದುಬೈ ನಲ್ಲೇ ಬೀಡುಬಿಟ್ಟಿದ್ದಾರೆ.
ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ಕುರಿತಂತೆ ಪಂದ್ಯಗಳನ್ನು ಆಯೋಜನೆ ಮಾಡಲು ಯುಎಇ ಕ್ರಿಕೆಟ್ ಮಂಡಳಿಯ ಜೊತೆ ಮಾತುಕತೆ ನಡೆಸುತ್ತಿದೆ.
ಬಿಸಿಸಿಐ ಮೂಲದ ಪ್ರಕಾರ ಮುಂದುವರಿದ ಐಪಿಎಲ್ ಟೂರ್ನಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಪಂದ್ಯಗಳ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಪಂದ್ಯವನ್ನು 25 ದಿನದೊಳಗೆ ಮುಗಿಸಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ಎಂಟು ದಿನದ ಬದಲು ಹತ್ತು ದಿನ ತಲಾ ಎರಡು ಪಂದ್ಯಗಳು ನಡೆಯಲಿವೆ. ಅಲ್ಲದೆ ಲೀಗ್ ನ ಕೊನೆಯ ಹಂತದ ಪಂದ್ಯಗಳು ಮತ್ತು ನಾಕೌಟ್ ಮತ್ತು ಫೈನಲ್ ಪಂದ್ಯಗಳನ್ನು ಒಂದೇ ತಾಣದಲ್ಲಿ ಆಯೋಜನೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಬಹುತೇಕ ಫೈನಲ್ ಪಂದ್ಯ ದುಬೈ ನಲ್ಲಿ ನಡೆಯುವುದು ಖಚಿತವಾಗಿದೆ. ಜೂನ್ ಕೊನೆಯ ವಾರ ಐಪಿಎಲ್ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಲಿದೆ.
ಇನ್ನು ಟೂರ್ನಿಯ ಪಂದ್ಯಗಳು ಕಳೆದ ಬಾರಿಯಂತೆ ಶಾರ್ಜಾ, ಅಬುಧಾಬಿ ಮತ್ತು ದುಬೈ ನಲ್ಲಿ ನಡೆಯಲಿದೆ. ಹೆಚ್ಚುವರಿ ತಾಣವಾಗಿ ಓಮನ್ ಅನ್ನು ನಿಗದಿಪಡಿಸಲಾಗಿದೆ.
ಇನ್ನೊಂದೆಡೆ ಬಿಸಿಸಿಐಗೆ ಟಿ-ಟ್ವೆಂಟಿ ವಿಶ್ವಕಪ್ ಆಯೋಜನೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಂದು ವೇಳೆ ಭಾರತದಿಂದ ಟಿ-ಟ್ವೆಂಟಿ ವಿಶ್ವಕಪ್ ಶಿಫ್ಟ್ ಆದ್ರೆ, ಯುಎಇನಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡಲಾಗುವುದು. ಆಗ ಐಸಿಸಿಗೆ ಅಕ್ಟೋಬರ್ ನಲ್ಲಿ ಯುಎಇ ನ ಮೂರು ತಾಣಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ಒಮನ್ ತಾಣವನ್ನು ಹೆಚ್ಚುವರಿ ತಾಣವನ್ನಾಗಿ ಫಿಕ್ಸ್ ಮಾಡಲಾಗಿದೆ.
ಸೆಪ್ಟಂಬರ್ 17ರಿಂದ ಅಥವಾ 19ರಿಂದ ಐಪಿಎಲ್ ಭಾಗ -2ರ ಪಂದ್ಯಗಳು ಶುರುವಾಗುವುದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಫ್ರಾಂಚೈಸಿಗಳು ಕೂಡ ಸಿದ್ಧತೆ ಮಾಡಿಕೊಳ್ಳುತ್ತಿವೆ.