IPL 2022: ಡೆಲ್ಲಿ ತಂಡದಲ್ಲಿ ನಿಲ್ಲದ ಕೋವಿಡ್ ಆತಂಕ; ಐದು ದಿನಗಳು ಐಸೋಲೇಟ್ ಆಗಲಿರುವ ರಿಕಿ ಪಾಂಟಿಂಗ್
15ನೇ ಆವೃತ್ತಿಯ ಐಪಿಎಲ್ನಲ್ಲಿ ಕೋವಿಡ್-19 ಆತಂಕ ಮುಂದುವರಿದಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರ ಕುಟುಂಬಸ್ಥರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ರಿಕಿ ಪಾಂಟಿಂಗ್ ತಮ್ಮ ಹೋಟೆಲ್ ರೂಮ್ನಲ್ಲಿ ಐಸೋಲೇಟ್ ಆಗಲಿದ್ದಾರೆ.
ರಿಕಿ ಪಾಂಟಿಂಗ್ ಅವರ ಕುಟುಂಬಸ್ಥರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದರು, ಪಾಂಟಿಂಗ್ ಅವರ ಕೋವಿಡ್ ರಿಪೋರ್ಟ್ ಎರಡು ಬಾರಿಯೂ ನೆಗೆಟಿವ್ ಬಂದಿದೆ.
ಆದರೆ ತಂಡದ ಹಿತಾಸಕ್ತಿ ಕಾರಣದಿಂದ ತಂಡದ ಮ್ಯಾನೇಜ್ಮೆಂಟ್ ಹಾಗೂ ವೈದ್ಯಕೀಯ ತಂಡ ರಿಕಿ ಪಾಂಟಿಂಗ್ ಅವರನ್ನು ಐದು ದಿನಗಳವರೆಗೆ ಐಸೋಲೇಟ್ ಮಾಡಲು ನಿರ್ಧರಿಸಿದೆ ಎಂದು ಡೆಲ್ಲಿ ಫ್ರಾಂಚೈಸಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಂದು ಮುಂಬೈನ ವಾಂಖೆಡೆಯಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ರಿಕಿ ಪಾಂಟಿಂಗ್ ಕಾಣಿಸಿಕೊಳ್ಳುವುದಿಲ್ಲ.
ಇನ್ನೂ ಡೆಲ್ಲಿ ತಂಡದಲ್ಲಿ ಕೋವಿಡ್ ಆತಂಕ ಇರುವ ನಡುವೆಯೂ ಉಭಯ ತಂಡಗಳ ನಡುವಿನ ಇಂದಿನ ಪಂದ್ಯ ನಿಗದಿಯಂತೆ ನಡೆಯಲಿದೆ.
ಅಲ್ಲದೇ ರಿಕಿ ಪಾಂಟಿಂಗ್ ಅವರ ಅಲಭ್ಯತೆ ಕೇವಲ ಇಂದಿನ ಪಂದ್ಯಕ್ಕೆ ಮಾತ್ರವೇ ಆಗಿದ್ದು, ಡೆಲ್ಲಿ ಕ್ಯಾಪಿಟಲ್ಸ್, ಏಪ್ರಿಲ್ 28ರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.
ಹೀಗಾಗಿ ರಿಕಿ ಪಾಂಟಿಂಗ್ ಅವರು ಕೂಡಲೇ ತಂಡದ ಇತರೆ ಕೋಚಿಂಗ್ ಸ್ಟಾಫ್ಗಳಾದ ಪ್ರವೀಣ್ ಆಮ್ರೆ, ಜೇಮ್ಸ್ ಹೋಪ್ಸ್, ಅಜಿತ್ ಅಗರ್ಕರ್ ಹಾಗೂ ಶೇನ್ ವಾಟ್ಸನ್ ಅವರನ್ನು ಕೂಡಿಕೊಳ್ಳಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ವಿಶ್ವಾಸ ಹೊಂದಿದೆ.
ಪ್ರಸಕ್ತ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ಯಾವುದೇ ತಂಡದಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿಲ್ಲ.
ಡೆಲ್ಲಿ ತಂಡದಲ್ಲಿ ಹಲವು ಆಟಗಾರರಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಮಿಚೆಲ್ ಮಾರ್ಷ್, ಟಿಮ್ ಸೈಫರ್ಟ್ ಸೇರಿದಂತೆ ತಂಡದ ಹಲವು ಸಪೋರ್ಟ್ ಸ್ಟಾಫ್ ಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.a