IPL 2022 | ಬದಲಾಗದ ಮುಂಬೈ ನಸೀಬು.. ಸತತ 8ನೇ ಸೋಲು
ಮುಂಬೈನ ವಾಂಖೆಡೆ ಅಂಗಳದಲ್ಲೂ ಮುಂಬೈ ಇಂಡಿಯನ್ಸ್ ತಂಡದ ನಸೀಬು ಬದಲಾಗಲಿಲ್ಲ.
ಈ ಬಾರಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ಬಳಗ ಸತತ ಎಂಟನೇ ಸೋಲು ಅನುಭವಿಸಿದೆ.
ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡ 36 ರನ್ ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ಈ ಸವಾಲು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೆ ಶಕ್ತಿವಾಗಿತ್ತು.
ಆ ಮೂಲಕ 36 ರನ್ಗಳ ಸೋಲನುಭವಿಸಿದ ಮುಂಬೈ ಇಂಡಿಯನ್ಸ್, 2022ರ ಐಪಿಎಲ್ನಲ್ಲಿ ಸತತ 8ನೇ ಸೋಲಿನ ಆಘಾತ ಕಂಡಿತು.
ಮತ್ತೊಂದೆಡೆ ಭರ್ಜರಿ ಗೆಲುವು ಸಾಧಿಸಿ ಲಕ್ನೋ ಸೂಪರ್ ಜೈಂಟ್ಸ್, ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಿದೆ.
ಲಕ್ನೋ ಸೂಪರ್ ಜೈಂಟ್ಸ್ ನೀಡಿದ 169 ರನ್ಗಳ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್, ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ಮುಗ್ಗರಿಸಿತು.
ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ 8 ರನ್ ಗಳಿಸಿ ಔಟ್ ಆದರು.
ಡೆವಾಲ್ಡ್ ಬ್ರೇವಿಸ್(3), ಸೂರ್ಯಕುಮಾರ್(7), ಕೈರನ್ ಪೊಲಾರ್ಡ್(19), ಡೆನಿಯಲ್ ಸ್ಯಾಮ್ಸ್(3), ಜಯದೇವ್ ಉನಾದ್ಕಟ್(1) ಬ್ಯಾಟಿಂಗ್ನಲ್ಲಿ ವಿಫಲರಾದರು.
ನಾಯಕ ರೋಹಿತ್ ಶರ್ಮ 39 ರನ್, ತಿಲಕ್ ವರ್ಮ 38 ರನ್ ಗಳಿಸಿದ್ರೂ ಯಾವುದೇ ಪ್ರಯೋಜನೆ ಆಗಲಿಲ್ಲ.
ಲಕ್ನೋ ಸೂಪರ್ ಜೈಂಟ್ಸ್ ಪರ ಕೃನಾಲ್ ಪಾಂಡ್ಯ ಮೂರು ವಿಕೆಟ್, ಆಯುಷ್ ಬಡೋನಿ, ಮೊಹ್ಶಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ಗೆ ನಾಯಕ ಕೆ.ಎಲ್.ರಾಹುಲ್ ನೆರವಾದರು.
ಮುಂಬೈ ಬೌಲರ್ ಗಳನ್ನು ದಂಡಿಸಿದ ರಾಹುಲ್, 62 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ನೆರವಿನಿಂದ 103 ರನ್ ಗಳಿಸಿದರು.
ಅಲ್ಲದೆ ಪ್ರಸಕ್ತ ಐಪಿಎಲ್ನಲ್ಲಿ 2ನೇ, ಮುಂಬೈ ವಿರುದ್ಧದ 3ನೇ ಹಾಗೂ ಐಪಿಎಲ್ನ 4ನೇ ಶತಕ ಬಾರಿಸಿ ಮಿಂಚಿದರು.
ಆದರೆ ರಾಹುಲ್ ಹೊರತುಪಡಿಸಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಆಟವಾಡಲಿಲ್ಲ.
ಕ್ವಿಂಟನ್ ಡಿಕಾಕ್(10), ಮನೀಷ್ ಪಾಂಡೆ(22), ಕೃನಾಲ್ ಪಾಂಡ್ಯ(1) ಹಾಗೂ ದೀಪಕ್ ಹೂಡ(10) ಹಾಗೂ ಆಯುಷ್ ಬಡೋನಿ(14) ರನ್ಗಳಿಸಿದರು.