RCBಗೆ ಕಾಡುತ್ತಿದೆ ದೊಡ್ಡ ಶನಿ ಕಾಟ
1 min read
RCB vs pbks match rcb miss golden chance saaksha tv
RCBಗೆ ಕಾಡುತ್ತಿದೆ ದೊಡ್ಡ ಶನಿ ಕಾಟ
ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಎಂಬಂತಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಥಿತಿ. ನಾಯಕ ಬದಲಾದ್ರೂ, ಜರ್ಸಿ ಚೇಂಜ್ ಆದ್ರೂ, ಹೊಸ ಆಟಗಾರರು ಬಂದ್ರೂ ಆ ಒಂದು ಸಮಸ್ಯೆ ಮಾತ್ರ ಆರ್ ಸಿಬಿಯ ತಲೆಮೇಲಿಂದ ಇಳೀತಿಲ್ಲ. ಇದು ಪದೇ ಪದೇ ತಂಡದ ಸೋಲಿಗೆ ಕಾರಣವಾಗುತ್ತಲೇ ಇದೆ. ಕಳೆದ ಕೆಲವು ವರ್ಷಗಳಿಂದ ಬೇತಾಳನಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆನ್ನೇರಿಸುವ ಸಮಸ್ಯೆ ಅಂದ್ರೆ ಅದು ಓಪನಿಂಗ್ ಕಾಂಬಿನೇಷನ್ ಮತ್ತು ಒನ್ ಡೌನ್ ಸಮಸ್ಯೆ..!!
ಹೌದು..! 2010 ರ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೆಗಲೇರಿದ ಶನಿ, ಓಪನಿಂಗ್ ಸಮಸ್ಯೆ. ಆರಂಭದಲ್ಲಿ ಇದಕ್ಕೆ ಸಾಕಷ್ಟು ಪ್ರಯೋಗಗಳು ನಡೆದವು. ಕ್ರಿಸ್ ಗೇಲ್ ಮೂಲಕ ಅದಕ್ಕೆ ಉತ್ತರ ಸಿಕ್ಕರೂ ಅವರ ಜೊತೆ ಆರಂಭಿಕರಾಗಿ ಆಡೋದು ಯಾರು ಅನ್ನೋ ಪ್ರಶ್ನೆ ಬಂತು. ಶ್ರೀಲಂಕಾ ಬ್ಯಾಟರ್ ದಿಲ್ ಶಾನ್ ಕೆಲ ವರ್ಷ ಆರಂಭಿಕರಾದ್ರೆ, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್ ಕೂಡ ಆರ್ ಸಿಬಿಯ ಓಪನರ್ ಆಗಿದ್ದರು. 2016ರಲ್ಲಿ ವಿರಾಟ್ ಕೊಹ್ಲಿಯೇ ಆರಂಭಿಕರಾಗಿ ಬಂದು ಆ ಸಮಸ್ಯೆಗೆ ತಿಲಾಂಜಲಿ ಇಟ್ಟರು. ಆದ್ರೆ ಇಲ್ಲಿಂದ ಒನ್ ಡೌನ್ ಸಮಸ್ಯೆ ಉಂಟಾಯಿತು.
ವಿರಾಟ್ ಕೊಹ್ಲಿ ಓಪರ್ ಆಗಿ ಬಂದು ಅದ್ಭುತಗಳನ್ನು ಸೃಷ್ಟಿ ಮಾಡಿದ್ರು. ದಾಖಲೆಗಳನ್ನು ಬರೆದರು. ಆದ್ರೆ ಒನ್ ಡೌನ್ ಸಮಸ್ಯೆ ಮಾತ್ರ ಬೆಳೆಯುತ್ತಲೇ ಹೋಯ್ತು. ಈ ಸಮಸ್ಯೆಗೆ ಮುಲಾಮಿನಂತೆ ಸಾಕಷ್ಟು ಅನುಭವಿ, ಯುವ ಆಟಗಾರರನ್ನ ಟ್ರೈ ಮಾಡಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ.
ಹೀಗಾಗಿ 2022ರ ಮೆಗಾ ಹಜಾರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಪಕ್ಕಾ ಲೆಕ್ಕಾಚಾರ ಹಾಕಿ ತಂಡವನ್ನ ಖರೀದಿ ಮಾಡಿತು. ಫಾಫ್ ಡುಪ್ಲಸಿ ಅವರನ್ನ ಖರೀದಿ ಮಾಡಿ, ಇವರೇ ನಮ್ಮ ಆರಂಭಿಕರು ಅಂತಾ ಸಾರಿ ಘೋಷಿಸಿತ್ತು. ಆದ್ರೆ ಅವರೊಂದಿಗೆ ಯಾರು ಓಪನ್ ಮಾಡ್ತಾರೆ ಅನ್ನೋದು ಮುನ್ನಲೆಗೆ ಬಂತು. ಆರಂಭದಲ್ಲಿ ವಿರಾಟ್ ಕೊಹ್ಲಿಯೇ ಓಪನ್ ಮಾಡ್ತಾರೆ ಅಂತಾ ಹೇಳಲಾಗಿತ್ತು. ಅಂತಿಮವಾಗಿ ಅನೂಜ್ ರಾವತ್ ಈಗ ಇನ್ನಿಂಗ್ಸ್ ಆರಂಭ ಮಾಡ್ತಿದ್ದಾರೆ. ವಿರಾಟ್ ಒನ್ ಡೌನ್ ನಲ್ಲಿ ಕ್ರೀಸ್ ಗೆ ಬರ್ತಿದ್ದಾರೆ.
ಇಲ್ಲಿಗೆ ಸಮಸ್ಯೆ ಬಗೆಹರಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮೊದಲಿಗೆ ಬಂದಿದೆ. ಯಾಕಂದರೇ ಫಾಫ್ ಡುಪ್ಲಸಿ ಮತ್ತು ಅನೂಜ್ ರಾವತ್ ತಂಡಕ್ಕೆ ಉತ್ತಮ ಆರಂಭವನ್ನು ಕೊಡುವಲ್ಲಿ ವಿಫಲರಾಗುತ್ತಿದ್ದಾರೆ. ಮುಖ್ಯವಾಗಿ ಪವರ್ ಪ್ಲೇ ಅನ್ನು ಬಳಸಿಕೊಳ್ಳುವಲ್ಲಿ ಇಬ್ಬರೂ ವಿಫಲರಾಗುತ್ತಿದ್ದಾರೆ. ಫಾಫ್ ಮೊದಲ ಪಂದ್ಯದಲ್ಲಿ ಮಿಂಚಿದ್ರೆ, ಅನೂಜ್ ಮುಂಬೈ ವಿರುದ್ಧ ಅಬ್ಬರಿಸಿದರು. ಆದ್ರೆ ಇನ್ನುಳಿದ ಪಂದ್ಯಗಳಲ್ಲಿ ಇಬ್ಬರೂ ಮಕಾಡೆ ಮಲಗಿದ್ದಾರೆ. ರನ್ ಗಳಿಸೋದು ಇರಲಿ ವಿಕೆಟ್ ಉಳಿಸಿಕೊಂಡರೇ ಸಾಕು ಎಂಬಂತಾಗಿದೆ.
ಇತ್ತ ಒನ್ ಡೌನ್ ನಲ್ಲಿ ಬರುವ ವಿರಾಟ್ ಕೊಹ್ಲಿ ಕೂಡ ಮೊದಲಿನ ಖದರ್ ನಲ್ಲಿ ಕಾಣ್ತಿಲ್ಲ. ಒಂದು ಪಂದ್ಯದಲ್ಲಿ ಮಿಂಚಿದ್ರೆ ಎರಡು ಪಂದ್ಯಗಳಲ್ಲಿ ಡಲ್ ಹೊಡೆಯುತ್ತಿದ್ದಾರೆ. ಹೀಗಾಗಿ ಈ ಟಾಪ್ ಆರ್ಡರ್ ವೈಪಲ್ಯ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.
ಫಾಫ್, ಕೊಹ್ಲಿ ಬೇಗ ಔಟ್ ಆಗುತ್ತಿರುವುದರಿಂದ ಮಿಡಲ್ ಆರ್ಡರ್ ಮತ್ತು ಲೋ ಆರ್ಡರ್ ಬ್ಯಾಟರ್ ಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಉತ್ತಮ ಬ್ಯಾಟಿಂಗ್ ವಿಭಾಗವಿದ್ದರೂ ಪಂದ್ಯ ಸೋಲಬೇಕಾಗುತ್ತಿದೆ.