IPL 2022 :RR vs DC – ಪ್ಲೇ ಆಫ್ ಆಸೆ ಜೀವಂತವಾಗಿರಲು ಗೆಲ್ಲಲೇಬೇಕು ಡೆಲ್ಲಿ..
ಇಂದು ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸಂಜೆ 7:30 ಕ್ಕೆ ಪಂದ್ಯ ಆರಂಭವಾಗಲಿದೆ.
ರಾಜಸ್ಥಾನ್ ರಾಯಲ್ಸ್ ಇಲ್ಲಿಯವರೆಗೆ 11 ಪಂದ್ಯಗಳನ್ನ ಆಡಿದ್ದು, 7 ರಲ್ಲಿ ಗೆಲುವು ಸಾಧಿಸಿ, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ 11 ಪಂದ್ಯಗಳನ್ನ ಆಡಿದ್ದು, 6 ಪಂದ್ಯಗಳಲ್ಲಿ ಸೋತು ಕೇವಲ 5 ಪಂದ್ಯಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಎರಡೂ ತಂಡಗಳ ನಾಯಕರಾದ ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವರನ್ನು ಟಿ20 ವಿಶ್ವಕಪ್‌ಗೆ ಭಾರತ ತಂಡಕ್ಕೆ ಪರಿಗಣಿಸಿರುವುದರಿಂದ ಪರಸ್ಪರ ಇಬ್ಬರೂ ಸಹ ಬೇಕಾದ ಎಲ್ಲಾ ಪ್ರಯತ್ನಗಳನ್ನ ಮಾಡುತ್ತಿದ್ದಾರೆ.
ಹರಾಜಿನ ವೇಳೆ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನ ಆಯ್ಕೆ ಮಾಡಿಕೊಂಡಿದ್ದ ರಾಜಸ್ಥಾನ್ ರಾಯಲ್ಸ್ ತಕ್ಕ ಫಲಿತಾಂಶವನ್ನ ಪಡೆಯುತ್ತಿದೆ. ಟ್ರೆಂಟ್ ಬೌಲ್ಟ್ ಮತ್ತು ಪ್ರಸಿದ್ಧ ಕೃಷ್ಣ ವೇಗದ ಬೌಲಿಂಗ್ ನಿಂದ ಎದುರಾಳಿಗಳಿಗೆ ದುಸ್ವಪ್ನವಾಗಿದ್ದಾರೆ. ಯುಜ್ವೇಂದ್ರ ಚಹಾಲ್ ತಮ್ಮ ಸ್ಪಿನ್ ಮೋಡಿಯಿಂದ ಟೂರ್ನಿಯಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಜೋಸ್ ಬಟ್ಲರ್ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಅಬ್ಬರಿಸುತ್ತಿದ್ದಾರೆ. ರಾಜಸ್ಥಾನಕ್ಕೆ ಬ್ಯಾಟಿಂಗ್ ಬೆನ್ನೆಲುನಂತೆ ನಿಂತಿದ್ದಾರೆ. ಆದರೆ ನಾಯಕ ಸಂಜು ಸ್ಯಾಮ್ಸನ್ ಪ್ರದರ್ಶನದಲ್ಲಿ ಸ್ಥಿರತೆಯ ಕೊರತೆ ಹಾಗೇ ಉಳಿದಿದೆ. ಡೆಲ್ಲಿ ವಿರುದ್ಧವಾದರೂ ಸ್ಯಾಮ್ಸನ್ ಬಿಗ್ ಇನ್ನಿಂಗ್ಸ್ ಆಡಿದರೆ ಬ್ಯಾಟಿಂಗ್ ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡುವ ಸಾಧ್ಯತೆ ಇದೆ.
ಡೆಲ್ಲಿಯಿಂದ ಬರಬೇಕಿದೆ ಬಲಿಷ್ಠ ಪ್ರದರ್ಶನ
ಡೆಲ್ಲಿ ಕ್ಯಾಪಿಟಲ್ಸ್ ಕೊರೊನಾ ಸೋಂಕಿನಿಂದ ಪದೇ ಪದೇ ತೊಂದರೆಗೊಳಗಾಗುತ್ತಿದೆ. ಆಟಗಾರರ ಹೊರತಾಗಿ, ಸಹಾಯಕ ಸಿಬ್ಬಂದಿ ಕೂಡ ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ಆಟದ ತಂತ್ರಗಳ ಮೇಲೆ ಗಮನ ಹರಿಸಲು ತಂಡಕ್ಕೆ ಕಷ್ಟವಾಗುತ್ತಿದೆ. ಡೆಲ್ಲಿ ಕೈಯಲ್ಲಿ ಇನ್ನೂ ಮೂರು ಪಂದ್ಯಗಳಿವೆ, ಎಲ್ಲವನ್ನೂ ಗೆದ್ದರೆ, ಪ್ಲೇ ಆಫ್ ಗೇರುವ ಚಾನ್ಸ್ ಇನ್ನೂ ಇದೆ.
11 ಮ್ಯಾಚ್ ಗಳನ್ನ ಆಡಿದ ನಂತರವೂ ನಾಯಕ ರಿಷಬ್ ಪಂತ್ ದೊಡ್ಡ ಇನ್ನಿಂಗ್ಸ್‌ಗಾಗಿ ತಡಕಾಡುತ್ತಿದ್ದಾರೆ. ಪಂತ್ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ಗೊತ್ತು ಆದರೆ ಅದು ಬ್ಯಾಟಿಂಗ್ ವೇಳೆ ಕಾಣಿಸುತ್ತಿಲ್ಲ. ಚೆನ್ನೈ ವಿರುದ್ಧದ ಹೀನಾಯ ಸೋಲಿನ ನಂತರ ಈಗ ಡೆಲ್ಲಿ ತಂಡ ಸರ್ವ ಪ್ರಯತ್ನ ನಡೆಸಿ ಪುಟಿದೇಳಬೇಕಿದೆ.








