ಪ್ರಸಕ್ತ ಐಪಿಎಲ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಮೊಲದ ಗೆಲುವಿನ ಹುಡುಕಾಟ ನಡೆಸುತ್ತಿದೆ. ಈ ನಡುವೆ ಸೋಲಿನಿಂದ ಕಂಗಾಲಾಗಿರುವ ಡೆಲ್ಲಿ ತಂಡದ ಆರಂಭಿಕನಾಗಿ ಪೃಥ್ವಿ ಶಾ ಬದಲಾಗಿ ಮಿಚೆಲ್ ಮಾರ್ಷ್ ಅವರನ್ನ ಆಡಿಸುವಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಸಲಹೆ ನೀಡಿದ್ದಾರೆ.
16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಲ್ಲಾ ಐದು ಪಂದ್ಯಗಳನ್ನ ಸೋತು ಕಂಗಾಲಾಗಿದೆ. ಪ್ರತಿ ಪಂದ್ಯದಲ್ಲೂ ನೀರಸ ಪ್ರದರ್ಶನ ನೀಡುತ್ತಾ ಬಂದಿರುವ ಡೆಲ್ಲಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ರೈಡರ್ಸ್(ಕೆಕೆಆರ್) ತಂಡದ ಚಾಲೆಂಜ್ ಎದುರಿಸಲಿದ್ದು, ಇದಕ್ಕಾಗಿ ಡೆಲ್ಲಿ ಹುಡುಗರು ತಮ್ಮದೇ ರಣತಂತ್ರವನ್ನ ರೂಪಿಸಿಕೊಂಡಿದೆ.
ಈ ನಡುವೆ ಸೋಲಿನ ಸುಳಿಯಲ್ಲಿ ಸಿಲುಕಿರುವ ಡೆಲ್ಲಿ ತಂಡಕ್ಕೆ ಸಲಹೆ ನೀಡಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ, ತಂಡದ ಓಪನರ್ ಆಗಿ ಪೃಥ್ವಿ ಶಾ ಅವರ ಬದಲಾಗಿ ಡೇವಿಡ್ ವಾರ್ನರ್ ಅವರ ಜೊತೆಗೆ ಮಿಚೆಲ್ ಮಾರ್ಷ್ ಅವರನ್ನ ಕಣಕ್ಕಿಳಿಸುವಂತೆ ಟಿಪ್ಸ್ ಕೊಟ್ಟಿದ್ದಾರೆ. ಟೂರ್ನಿಯಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ಪೃಥ್ವಿ ಶಾ ಕೇವಲ 34 ರನ್‌ಗಳಿಸಿದ್ದು, 2 ಬಾರಿ ಡಕೌಟ್ ಆಗಿದ್ದಾರೆ.
ಹೀಗಾಗಿ ತಂಡಕ್ಕೆ ಸಲಹೆ ನೀಡಿರುವ ಟಾಮ್ ಮೂಡಿ, 2023 ಪೃಥ್ವಿ ಶಾ ಅವರ ವರ್ಷವಲ್ಲ. ತಂಡದ ಫ್ರಾಂಚೈಸಿ ಇವರಿಗೆ ಇನ್ನಷ್ಟು ಅವಕಾಶ ನೀಡುತ್ತಾ ಹೋದರೆ, ಡೆಲ್ಲಿ ತಂಡ ಟೂರ್ನಿಯಲ್ಲಿ ಜೀವಂತವಾಗಿರುವ ಅವಕಾಶ ಕಳೆದುಕೊಳ್ಳುತ್ತದೆ. ಹೀಗಾಗಿ ಈ ಸಮಸ್ಯೆಯನ್ನ ಸರಿಪಡಿಸಲು ಡೆಲ್ಲಿ ಕ್ಯಾಪಿಟಲ್ಸ್ ಸೂಕ್ತ ನಿರ್ಧಾರವನ್ನ ಕೈಗೊಳ್ಳಬೇಕಿದೆ ಎಂದಿದ್ದಾರೆ.
IPL 2023, Tom Moody, Delhi Capitals, Prithvi Shaw, Sports Karnataka








