ಐಪಿಎಲ್ಗೆ ಅಂತಿಮ ಮುಹೂರ್ತ ಫಿಕ್ಸ್ – ಸೆ.19ರಿಂದ ನ. 10ರವರೆಗೆ ಯುಎಇನಲ್ಲಿ ಐಪಿಎಲ್ ಆಟ
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ. ಹಾಗೇ ಚೀನಾದ ವಿವೋ ಮೊಬೈಲ್ ಕಂಪೆನಿಯ ಪ್ರಾಯೋಜಕತ್ವ ಸೇರಿದಂತೆ ಎಲ್ಲಾ ಪ್ರಾಯೋಜಕರನ್ನು ಉಳಿಸಿಕೊಳ್ಳಲಾಗಿದೆ. ಕೋವಿಡ್ 19 ಸೋಂಕಿನಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಲಾಗುವುದು ಎಂದು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನೊಂದೆಡೆ ಮಹಿಳಾ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಅನುಮತಿ ಸಿಕ್ಕಿದೆ. ಇನ್ನು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ ಸದ್ಯದಲ್ಲೇ ನೀಡಲಾಗುವುದು. ಪ್ರತಿ ತಂಡಗಳ ಆಟಗಾರರ ಸಂಖ್ಯೆ 24ಕ್ಕೆ ಸೀಮಿತಗೊಳಿಸಲಾಗಿದೆ. ಮುಂದಿನ ವಾರ ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ಇಲಾಖೆಯಿಂದ ಅನುಮತಿ ಸಿಗಲಿದೆ ಎಂದು ಐಪಿಎಲ್ ಮೂಲಗಳಿಂದ ತಿಳಿದು ಬಂದಿದೆ.
ಚೀನಾ – ಭಾರತ ಗಡಿಯಲ್ಲಿ ನಡೆದಿದ್ದ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಸ್ತುಗಳಿಗೆ ನಿಷೇಧ ವಿಧಿಸಲಾಗುತ್ತಿದೆ. ಈಗಾಗಲೇ ಕೆಲವೊಂದು ಆಪ್ಗಳಿಗೆ ಬ್ಯಾನ್ ಕೂಡ ಮಾಡಲಾಗಿದೆ. ಹೀಗಾಗಿ ವಿವೋ ಮೊಬೈಲ್ ಕಂಪೆನಿ ಸೇರಿದಂತೆ ಐಪಿಎಲ್ ಗೆ ಹಲವು ಚೀನಾ ಕಂಪೆನಿಗಳು ಪ್ರಾಯೋಜಕತ್ವ ನೀಡಿ ಒಪ್ಪಂದ ಮಾಡಿಕೊಂಡಿದ್ದವು. ಇದ್ರಿಂದ ಬಿಸಿಸಿಐ ಈ ಬಾರಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಪ್ರಸ್ತುತ ಆರ್ಥಿಕ ಸ್ಥಿತಿಯಲ್ಲಿ ಪ್ರಾಯೋಜಕರು ಸಿಗೋದು ಕಷ್ಟ. ಇದ್ರಿಂದ ಹಳೆಯ ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಮುಂದುರಿಸುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯ್ತು.
ಐಪಿಎಲ್ ಟೂರ್ನಿಯ ವೇಳೆ ವೈದ್ಯಕೀಯ ಸೌಲಭ್ಯಗಳ ಬಗ್ಗೆ ದುಬೈ ಮೂಲದ ಕಂಪೆನಿಯೊಂದು ಈ ಸಭೆಯಲ್ಲಿ ಪ್ರಸೆಂಟೇಷನ್ ನೀಡಿತ್ತು. ಹಾಗೇ ಆಟಗಾರರ ಜೈವಿಕ ಸುರಕ್ಷತೆಯ ಸೌಲಭ್ಯಗಳನ್ನು ನೀಡುವುದರ ಬಗ್ಗೆ ಬಿಸಿಸಿಐ ಟಾಟಾ ಗ್ರೂಪ್ ಜೊತೆ ಮಾತುಕತೆ ನಡೆಸಲಿದೆ.