ಐಪಿಎಲ್ 15ನೇ ಆವೃತ್ತಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.
ಲಖ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿ ಹೆಚ್ಚುವರಿಯಾಗಿ ಸೇರ್ಪಡೆ ಆಗಿರುವುದರಿಂದ ಹಲವು ಆಟಗಾರರು ರಿಟೈನ್ ಆಗುವ ಬದಲು ಹರಾಜಿನತ್ತ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಕೆಲವು ಆಟಗಾರರು ತಾವಾಗೇ ಫ್ರಾಂಚೈಸಿ ಬಿಡಲು ಮನಸ್ಸು ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಮಾಜಿ ನಾಯಕ ಡೇವಿಡ್ ವಾರ್ನರ್ ಹೊರಬರುವುದು ಖಚಿತವಾಗಿದೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಕೂಡ ಬೇರೆ ತಂಡಗಳತ್ತ ಮುಖ ಮಾಡಿರುವ ಬಗ್ಗೆ ವರದಿ ಆಗುತ್ತಿವೆ.
ಈಗ ರಾಜಸ್ಥಾನ್ ರಾಯಲ್ಸ್ ತಂಡದ ಸರದಿ. ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಸಂಜುಸ್ಯಾಮ್ಸನ್ ರಿಟೈನ್ ಆಗದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಜು ಸ್ಯಾಮ್ಸನ್ ಮೆಗಾ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಯಾಮ್ಸನ್ ನಾಯಕತ್ವ ವಹಿಸಿಕೊಂಡರೂ ರಾಯಲ್ಸ್ ದೊಡ್ಡ ಯಶಸ್ಸು ಕಂಡಿಲ್ಲ. ಹೀಗಾಗಿ ಸಂಜು ತಂಡ ತೊರೆಯಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ , ಸಂಜು ಸ್ಯಾಮ್ಸನ್ ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಸಕ್ತಿ ಹೊಂದಿದೆ ಎಂದು ಸುದ್ದಿಗಳು ಹೊರ ಬಿದ್ದಿವೆ.
ಸಿಎಸ್ಕೆ ತಂಡವು ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದು ಆ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸ್ಯಾಮ್ಸನ್ ಸೂಕ್ತ ಆಯ್ಕೆ ಎಂಬ ಅಭಿಪ್ರಾಯ ಸಿಎಸ್ಕೆ ಫ್ರಾಂಚೈಸಿ ವಲಯದಲ್ಲಿದೆ.
ಹೀಗಾಗಿ ಸ್ಯಾಮ್ಸನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ಪ್ರಮುಖ ತಂಡಗಳು ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸಲಿದೆ.
ಒಟ್ಟಿನಲ್ಲಿ ಮೆಗಾ ಹರಾಜಿನಲ್ಲಿ ಸೂಪರ್ ಸ್ಟಾರ್ ಆಟಗಾರರು ಭಾಗವಹಿಸಿದರೆ ಫ್ರಾಂಚೈಸಿಗಳ ನಡುವೆ ಆಟಗಾರರ ಖರೀದಿಗಾಗಿ ದೊಡ್ಡ ಪೈಪೋಟಿ ನಡೆಯುವುದು ಖಚಿತ.