11 ಮಂದಿ ಬಲಿಯಾದ ಅಭಿಮಾನಿಗಳಿಗೆ ವಿರಾಟ್ ಕೊಟ್ಟ ಗೌರವ ಇದೇನಾ..? 18ರ ನಂಟಿನಲ್ಲಿ ಆರ್‍ಸಿಬಿ ಕೊಟ್ಟಿದ್ದು ಒಂದು ಕಪ್.. 17 ಚಿಪ್ಪು..!
ಕಣಕಣದಲ್ಲೂ ಆರ್‍ಸಿಬಿ.. ಮನ ಮನದಲ್ಲೂ ಆರ್‍ಸಿಬಿ.. ಪ್ರತಿ ಮನೆಮನೆಯಲ್ಲೂ ಆರ್‍ಸಿಬಿ.. ಗಲ್ಲಿ ಗಲ್ಲಿಗಳಲ್ಲೂ ಆರ್‍ಸಿಬಿ.. ಅಷ್ಟೇ ಯಾಕೆ, ಸುಮಾರು 21 ಮಿಲಿಯನ್ ಅಭಿಮಾನಿಗಳ ಹೃದಯ ಬಡಿತವೂ ಆರ್‍ಸಿಬಿ.. ಸೋತ್ರೂ ಆರ್‍ಸಿಬಿ.. ಗೆದ್ರೂ ಆರ್‍ಸಿಬಿ..ಮೈದಾನದಲ್ಲಿ ಕೆಂಪು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತಿರುವ ಸದ್ದಿನಂತೆ ಕೇಳಿಬರುತ್ತಿರುವ ಎರಡೇ ಎರಡು ಧ್ವನಿಗಳು ಅವು.. ಆರ್‍ಸಿಬಿ.. ಆರ್‍ಸಿಬಿ.. ಆರ್‍ಸಿಬಿ.. ! ಕೊಹ್ಲಿ.. ಕೊಹ್ಲಿ.. ಕೊಹ್ಲಿ.. ಆದ್ರೆ ಈಗ ಕೇಳಿ ಬರುತ್ತಿರುವುದು ಒಂದೇ ಮಾತು.. ಅದು ಎಂಥಾ ಸಾವು ಮಾರಾಯ ಅಂತ..!
ಇದು ಎಂಥಾ ದುರಂತ..! ಆರ್‍ಸಿಬಿಯ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಯಾರೋ ಮಾಡಿರುವ ಎಡವಟ್ಟಿಗೆ ಅಮಾಯಕರು ಬಲಿಯಾದರಲ್ಲ.. ಇದು ಸರಿನಾ..? ಪ್ಲೇಯಿಂಗ್ 11 ಆಟಗಾರರ ಯಶಸ್ಸಿಗೆ 11 ಮಂದಿ ಅಭಿಮಾನಿಗಳನ್ನು ಬಲಿಕೊಟ್ಟಿರುವುದು ನ್ಯಾಯಾನಾ..?
ಹೌದು, ನಮ್ಮ ಬೆಂಗಳೂರಿನ ಹೆಮ್ಮೆ ಅದು ಚಿನ್ನಸ್ವಾಮಿ ಕ್ರೀಡಾಂಗಣ. ಅದೆಷ್ಟೋ ಕ್ರಿಕೆಟ್À ಪ್ರತಿಭೆಗಳನ್ನು ಬೆಳಕಿಗೆ ತಂದ ಗ್ರೌಂಡ್… ಹಲವು ದಾಖಲೆಗಳಿಗೆ ಸಾಕ್ಷಿಯಾದ ಅಂಗಣ.. ವಿಶ್ವಕಪ್ ಸೇರಿದಂತೆ ಅದೆಷ್ಟೋ ಐತಿಹಾಸಿಕ ಪಂದ್ಯಗಳನ್ನು ಸಂಘಟಿಸಿದ್ದ ತಾಣ..ಬಾಂಬ್ ಸ್ಫೋಟಗೊಂಡಿದ್ರೂ ಒಂದೇ ಒಂದು ಪ್ರಾಣವನ್ನು ಕಸಿದುಕೊಳ್ಳದ ಮೈದಾನ…!
ಆದ್ರೆ… 6255 ದಿನ.. ಅಂದ್ರೆ ಸರಿ ಸುಮಾರು 18 ವರ್ಷಗಳ ಬಳಿಕ ಗೆದ್ದ ಒಂದೇ ಒಂದು ಐಪಿಎಲ್ ಟ್ರೋಫಿ…ü ನೆಲ್ಮೆಯ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಸ್ಮಶಾನವನ್ನಾಗಿಸಿರುವುದು ಎಷ್ಟು ಸರಿ..? 40 ವರ್ಷಗಳ ಕಾಲ ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಒಂದು ಬಾರಿ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ. ಚಿನ್ನಸ್ವಾಮಿಯವರ ಹೆಸರಿನ ಅಂಗಣಕ್ಕೆ ಸಾವಿನ ಮೈದಾನ ಎಂಬ ಕಪ್ಪು ಚುಕ್ಕೆ ಬಿದ್ದಿರುವುದನ್ನು ಸಹಿಸಿಕೊಳ್ಳುವುದು ಹೇಗೆ..? ಅಷ್ಟಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕಪ್ಪು ಮಸಿ ಅಂಟಿಕೊಂಡಿರುವುದನ್ನು ಅಳಿಸಿ ಹಾಕಲು ಸಾಧ್ಯನಾ..? ಇದು ಬರೀ ಬೆಂಗಳೂರು, ಕರ್ನಾಟಕ ಮಾತ್ರವಲ್ಲ..ಇತಿಹಾಸದ ಪುಟಗಳಲ್ಲಿ ದಾಖಲಾದ ಬ್ಲ್ಯಾಕ್ ಆಂಡ್ ಬೋರ್ಡ್..!
ಅಷ್ಟಕ್ಕೂ ಈ ಕಾಲ್ತುಳಿತದ ದುರಂತಕ್ಕೆ ಯಾರನ್ನು ದೂಷಣೆ ಮಾಡೋದು..? ಯಾರನ್ನು ಕೇಳೋದು..? ಅವರನ್ನು ಬಿಟ್ಟು ಇವರನ್ನು.. ಇವರನ್ನು ಬಿಟ್ಟು ಅವರನ್ನು… ಹೀಗೆ ಕೆಲವು ದಿನಗಳ ಮಟ್ಟಿಗೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲಕಳೆಯುವುದು. ಆಮೇಲೆ ಎಲ್ಲವೂ ಮರೆತು ಹೋಗುತ್ತೆ. ಆದ್ರೆ ಜೀವನ ಪೂರ್ತಿ ಕಣ್ಣೀರನ್ನು ಸುರಿಸುವುದು ಮಾತ್ರ ಸಾವನ್ನಪ್ಪಿದ್ದ 11 ಅಮಾಯಕರ ಕುಟುಂಬಸ್ಥರು.
ಈಗಾಗಲೇ ಕಪ್ ಗೆದ್ದವರು ಅವರವರ ಮನೆ ಸೇರಿಕೊಂಡಿದ್ದಾರೆ. ಮುಂದಿನ ವರ್ಷದ ಐಪಿಎಲ್‍ನಲ್ಲಿ ಎಷ್ಟು ಮಂದಿ ಆರ್‍ಸಿಬಿ ಪರ ಆಡ್ತಾರೋ ಗೊತ್ತಿಲ್ಲ. .ಐಪಿಎಲ್ ಸಂತೆಯಲ್ಲಿ ಹರಾಜಾಗುವ ಕ್ರಿಕೆಟಿಗರು ಯಾರು ಹೆಚ್ಚು ದುಡ್ಡು ಕೊಡ್ತಾರೋ ಅವರ ಮನೆ ಸೇರಿಕೊಳ್ಳುತ್ತಾರೆ. ಇಂತಹ ಕ್ರಿಕೆಟಿಗರನ್ನು ನಂಬುವ ಅಂಧಾಭಿಮಾನಿಗಳಿಗೆ ಯಾವ ರೀತಿ ಅರ್ಥಮಾಡಿಸುವುದು ಅನ್ನುವುದೇ ತಿಳಿಯುತ್ತಿಲ್ಲ.
ನಿಜ, ಆರ್‍ಸಿಬಿ ಅಂದ್ರೆ ವಿರಾಟ್ ಕೊಹ್ಲಿ.. ವಿರಾಟ್ ಕೊಹ್ಲಿ ಅಂದ್ರೆ ಆರ್‍ಸಿಬಿ. ಆರ್‍ಸಿಬಿ ಮೇಲಿನ ನಿಯತ್ತು.. ಆರ್‍ಸಿಬಿ ಮೇಲಿನ ಪ್ರೀತಿ.. ತಂಡದ ಮೇಲಿರುವ ಬದ್ಧತೆ..ವಿರಾಟ್‍ನ ವಿರಾಟ ದರ್ಶನ.. ವಿರಾಟ್‍ಗೋಸ್ಕರ ಕಪ್ ಗೆಲ್ಲಬೇಕು ಅನ್ನೋ ತುಡಿತ..ಕೊಹ್ಲಿಯ ಬ್ಯಾಟಿಂಗ್ ವೈಖರಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ, ಕೊಹ್ಲಿಯನ್ನು ಒಂದು ಬಾರಿ ಕಣ್ಣಾರೆ ನೋಡಬೇಕು ಅನ್ನೋ ಮಿಡಿತ.. ಹೀಗೆ ಎಲ್ಲವೂ ಓಕೆ..ಓಕೆ..!
ಆದ್ರೆ ಕೊಹ್ಲಿ ಏನು ಮಾಡಿದ..? 17 ವರ್ಷಗಳ ಬಳಿಕ ಕಪ್ ಗೆದ್ದ.. ಆರ್‍ಸಿಬಿ ಅಭಿಮಾನಿಗಳ ಮನ ತಣಿಸಿದ..ಸಂಭ್ರಮಾಚರಣೆಯ ಖುಷಿಯಲ್ಲಿ ಲಕ್ಷ ಲಕ್ಷ ಜನ ಸೇರುವಂತೆ ಮಾಡಿದ. ಶಕ್ತಿ ಸೌಧದ ಎದುರು ರಾಜಕಾರಣಿಗಳು ಹಾಗೂ ಅವರ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡ.. ಚಿನ್ನಸ್ವಾಮಿಯಲ್ಲಿ ತಂಡದ ಜೊತೆ ವಿಜಯೋತ್ಸವ ಆಚರಿಸಿಕೊಂಡ..ಆರ್‍ಸಿಬಿ ಫ್ರಾಂಚೈಸಿ, ಆರ್‍ಸಿಬಿ ಅಭಿಮಾನಿಗಳ ಪ್ರೀತಿ, ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ…ಆರ್‍ಸಿಬಿ ಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ.. ಅಷ್ಟೇ..ವಿಜಯೋತ್ಸವ ಕಾರ್ಯಕ್ರಮ ಮುಗಿಸಿ ನೇರವಾಗಿ ಮುಂಬೈನಲ್ಲಿರುವ ತನ್ನ ಮನೆ ಸೇರಿಕೊಂಡ. ಭಾರವಾದ ಹೃದಯದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ 11 ಮಂದಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ.. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ..ಅಲ್ಲಿಗೆ ಮುಗಿದೋಯ್ತು.. ಮುಂದಿನ ವರ್ಷ ಮತ್ತೆ ಐಪಿಎಲ್ ಶುರುವಾಗುತ್ತೆ.. ಮತ್ತೆ ಕೊಹ್ಲಿ ಮಂತ್ರವನ್ನು ಅಭಿಮಾನಿಗಳು ಪಠಿಸ್ತಾರೆ ಅನ್ನೋದು ಗೊತ್ತಿರುವ ವಿಚಾರ. ಯಾಕಂದ್ರೆ ಈ ಜಗದಲ್ಲಿ ಎಲ್ಲವೂ ಕ್ಷಣಿಕ..ಎಲ್ಲವೂ ಮರೆತು ಹೋಗುವುದು ಜಾಸ್ತಿ..!
ಆದ್ರೆ ಆರ್‍ಸಿಬಿ ತಂಡ, ಆರ್‍ಸಿಬಿ ಫ್ರಾಂಚೈಸಿ, ಅದರಲ್ಲೂ ವಿರಾಟ್ ಕೊಹ್ಲಿಯಿಂದ ಕೆಲವೊಂದು ವಿಚಾರಗಳನ್ನು ನಿರೀಕ್ಷೆ ಮಾಡಿರಲಿಲ್ಲ. ಚಿನ್ನಸ್ವಾಮಿ ಮೈದಾನದೊಳಗೆ ನಡೆಯುತ್ತಿದ್ದ ವಿಜಯೋತ್ಸವ ಕಾರ್ಯಕ್ರಮದ ವೇಳೆ ಹೊರಗಡೆ ನಡೆದಿದ್ದ ದುರ್ಘಟನೆಯು ಆರ್‍ಸಿಬಿ ಆಟಗಾರರಿಗೆ ಗೊತ್ತೇ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ..! ಆದ್ರೂ ಈ ದುರ್ಘಟನೆಯ ಬಗ್ಗೆ ಆರ್‍ಸಿಬಿ ಫ್ರಾಂಚೈಸಿ, ಆರ್‍ಸಿಬಿ ತಂಡ ಮುಖ್ಯವಾಗಿ ವಿರಾಟ್ ಕೊಹ್ಲಿ ಒಂದು ಸುದ್ದಿಗೋಷ್ಠಿ ನಡೆಸಿ 11 ಮಂದಿ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದಿತ್ತು. ಮೋಜು, ಮಸ್ತಿ, ನೆಟ್ ತಾಲೀಮು, ಆರ್‍ಸಿಬಿ ಮನೆಯ ಇಂಚಿಂಚೂ ಮಾಹಿತಿಗಳನ್ನು ಹಂಚಿಕೊಳ್ಳುವ ಆರ್‍ಸಿಬಿ ಮ್ಯಾನೇಜ್‍ಮೆಂಟ್‍ಗೆ ತನ್ನ ತಂಡಕ್ಕಾಗಿ ಬಲಿಯಾದವರ ಬಗ್ಗೆ ಒಂಚೂರು ಕನಿಕರವೂ ಬರಲಿಲ್ವಾ..? ಅದು ಇರಲಿ, ವಿಶ್ವದ ಶ್ರೇಷ್ಠ ಕ್ರಿಕೆಟಿಗನ ಮನಸು ಕೂಡ ಕರಗಲಿಲ್ವಾ.. ಕೇವಲ ತೋರಿಕೆಗೆ ಟ್ವಿಟರ್‍ನಲ್ಲಿ ಸಂತಾಪ ಸೂಚಿಸಬೇಕಾಗಿತ್ತಾ..? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸ್ ಭದ್ರತೆಯಲ್ಲಿ ಕನಿಷ್ಠ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ರೂ ಆರ್‍ಸಿಬಿ ಅಭಿಮಾನಿಗಳ ಅಭಿಮಾನಕ್ಕೆ ಒಂದು ರೀತಿಯ ಅರ್ಥವಿರುತ್ತಿತ್ತು. ಆದ್ರೆ ಆರ್‍ಸಿಬಿ ತಂಡ, ಆರ್‍ಸಿಬಿ ಫ್ರಾಂಚೈಸಿ ಅದನ್ನು ಮಾಡಲಿಲ್ಲ. ಸಾವನ್ನಪ್ಪಿದ್ದ ಅಮಾಯಕರ ಮನೆಗೆ ಭೇಟಿ ಕೊಡುವುದು ಕಷ್ಟ..ಮನಸು ಮಾಡಿದ್ರೆ ಅದೂ ಕೂಡ ಮಾಡುವುದು ಕಷ್ಟವೇನೂ ಅಲ್ಲ. ಆದ್ರೆ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಗೊಂಡವರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಬಹುದಿತ್ತು. ಆಗ ವಿರಾಟ್ ಕೊಹ್ಲಿ, ಆರ್‍ಸಿಬಿ ತಂಡದ ಮೇಲೆ ಪ್ರೀತಿ ಅಭಿಮಾನ ಇನ್ನಷ್ಟು ಹೆಚ್ಚುತ್ತಿತ್ತು.
ಕೊನೆಯದಾಗಿ ಯಾವ ಪುರುಷಾರ್ಥಕ್ಕಾಗಿ ಆರ್‍ಸಿಬಿ ಮೇಲೆ ಪ್ರೀತಿ, ಅಭಿಮಾನವನ್ನಿಟ್ಟುಕೊಳ್ಳಬೇಕು..? ಅಭಿಮಾನಿಗಳ ಸಾವು, ನೋವಿಗೆ ಸ್ಪಂದಿಸದ ತಂಡದ ಮೇಲೆ ಅಂಧಾಭಿಮಾನವನ್ನು ಇಟ್ಟುಕೊಳ್ಳಬೇಕಾ..? ಸತ್ತವರ ಕುಟುಂಬಸ್ಥರಿಗೆ ಪರಿಹಾರ ಕೊಟ್ರೆ ನಿಮ್ಮ ಕೆಲಸ ಮುಗಿದು ಹೋಯ್ತಾ..? ಅಷ್ಟಕ್ಕೂ ಆರ್‍ಸಿಬಿ ಫ್ರಾಂಚೈಸಿ ಕಳೆದ 18 ವರ್ಷಗಳಿಂದ ಅಭಿಮಾನಿಗಳಿಗೆ ಏನು ಕೊಟ್ಟಿದೆ..? ಟಿಕೆಟ್ ದರವನ್ನು ದುಪ್ಪಟ್ಟು ಮಾಡೋದು..? ಟಿಕೆಟ್ ಸೋಲ್ಡ್ ಔಟ್ ಅಂತ ಬೋರ್ಡ್ ಹಾಕೋದು..ನಿದ್ದೆಗೆಟ್ಟು ಪಂದ್ಯ ನೋಡಲು ಬರೋ ಅಭಿಮಾನಿಗಳಿಗೆ ಟಿಕೆಟ್ ಇಲ್ಲ ಅಂತ ನಿರಾಸೆಯನ್ನುಂಟು ಮಾಡೋದು.. ಸೋತಾಗ ಕಣ್ಣೀರು ಹಾಕಿಸೋದು.. ಗೆದ್ದು ಬೀಗಿ ಮತ್ತೆ ಪಂದ್ಯ ನೋಡುವಂತೆ ಮಾಡೋದು..ಅಭಿಮಾನಿಗಳ ಕೈಯಿಂದಲೇ ದುಡ್ಡು ವಸೂಲಿ ಮಾಡೋದು.. ಅನ್ ಬಾಕ್ಸ್ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಹಣ ಕೀಳುವುದು ಬಿಟ್ರೆ ಆರ್‍ಸಿಬಿ ಫ್ರಾಂಚೈಸಿ ಆರ್‍ಸಿಬಿ ಅಭಿಮಾನಿಗಳಿಗೆ ಏನು ಕೊಟ್ಟಿದೆ..? ಸ್ಟೇಡಿಯಂನಲ್ಲಿ ಫ್ರೀ ವೈಫೈ, ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಒಂದು ಮ್ಯಾಚ್ ಬಿಟ್ರೆ ಆರ್‍ಸಿಬಿ ಫ್ಯಾನ್ಸ್‍ಗೆ ಸಿಕ್ಕಿದ್ದು ಈಗ ಒಂದು ಕಪ್. ಆದ್ರೆ 17 ಬಾರಿ ಕೊಟ್ಟಿದ್ದು ಬರೀ ಚಿಪ್ಪು..! ಇಂತಹ ಕೃತಜ್ಞತೆ ಇಲ್ಲದ ತಂಡದ ಮೇಲೆ ಈ ರೀತಿಯ ಅಂಧಾಭಿಮಾನ ಬೇಕಾ..? ನೀವೇ ಯೋಚಿಸಿ..!
ಸನತ್ ರೈ