ಏಪ್ರಿಲ್ನಲ್ಲಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಭಾರತ ಭೇಟಿ
ಇಸ್ರೇಲ್ : ಭಾರತ-ಇಸ್ರೇಲ್ ದೇಶಗಳ ನಡುವಿನ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 30 ವರ್ಷ ಕಳೆದಿವೆ.
ಈ ಹಿನ್ನೆಲೆಯಲ್ಲಿ 30ನೇ ವಾರ್ಷಿಕೋತ್ಸವವನ್ನು ಆಚರಿಸಲು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಏಪ್ರಿಲ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಸಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ನಫ್ತಾಲಿ ಬೆನೆಟ್ ಏಪ್ರಿಲ್ 2ರ ಶನಿವಾರದಂದು ನವದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಇಸ್ರೇಲ್ ಪ್ರಧಾನಿಯ ವಿದೇಶಿ ಮಾಧ್ಯಮ ಸಲಹೆಗಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2ರಿಂದ ಏಪ್ರಿಲ್ 5ರವರೆಗೆ ನಾಲ್ಕು ದಿನದ ಭೇಟಿ ಇದಾಗಿದ್ದು, ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಮೈತ್ರಿಯನ್ನು ಮುನ್ನಡೆಸುವುದು, ದ್ವಿಪಕ್ಷೀಯ ಸಂಬಂಧ ವಿಸ್ತರಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ಭದ್ರತೆ ಮತ್ತು ಸೈಬರ್, ಕೃಷಿ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರ ವಿಸ್ತರಿಸುವ ಗುರಿಯನ್ನು ಈ ಭೇಟಿ ಹೊಂದಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಗ್ಲಾಸ್ಗೋದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (COP26) ಉಭಯ ನಾಯಕರ ನಡುವಿನ ಮೊದಲ ಮಾತುಕತೆ ನಡೆದಿತ್ತು. ಆ ಸಂದರ್ಭದಲ್ಲಿ ಮೋದಿ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಪ್ರಧಾನಿ ಬೆನೆಟ್ ಅವರನ್ನು ಆಹ್ವಾನಿಸಿದ್ದರು.








