ಬೆಂಗಳೂರು : ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ನಾಳೆ ನವದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಿಡಬ್ಲ್ಯುಸಿ ನಡೆಯಲಿದ್ದು, ಮುಂದಿನ ನಾಯಕತ್ವದ ಬಗ್ಗೆ ಚರ್ಚೆ ನಡೆಯಲಿದೆ. ಈಗಾಗಲೇ ರಾಹುಲ್, ಪ್ರಿಯಾಂಕಾ, ಗಾಂಧಿ ಕುಟುಂಬಕ್ಕೆ ಸೇರಿಲ್ಲದವರು ಅಧ್ಯಕ್ಷರಾಗಲಿ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಆದರೂ ಗಾಂಧಿ ಕುಟುಂಬವೇ ಪಕ್ಷವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೇ ಕೆಲವರು ನಾಯಕತ್ವದ ವಿಚಾರದಲ್ಲಿ ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಗಾಂಧಿ ಕುಟುಂಬದ ನಾಯಕತ್ವವನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದು, ಇದನ್ನು ಸಿದ್ದರಾಮಯ್ಯ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು ನಾವೆಲ್ಲರೂ ಪ್ರಯತ್ನಿಸಬೇಕು, ದುರ್ಬಲಗೊಳಿಸುವುದಲ್ಲ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.