ಬೆಂಗಳೂರು : ರಾಜಧಾನಿಯಲ್ಲಿ ವರುಣನ ಆರ್ಭಟ ಈಗಾಗಲೇ ಆರಭವಾಗಿದೆ. ಹಲವೆಡೆ ನೀರು ರಸ್ತೆ ತುಂಬಿ ಮನೆ, ಅಪಾರ್ಟ್ ಮೆಂಟ್ ಒಳಗೆ ನುಗ್ಗಿದೆ. ಹೀಗಾಗಿ ಬಹುತೇಕ ಕಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂಬುವುದು ಖುಷಿಯ ಸಂಗತಿ.
ಹೆಗಡೆ ನಗರ, ಜಕ್ಕೂರು ಲೇಔಟ್, ಕಾಫಿ ಬೋರ್ಡ್ ಲೇಔಟ್, ಜೆ.ಪಿ.ನಗರ, ಜಯನಗರ, ಉಳ್ಳಾಲ, ಆರ್.ಟಿ.ನಗರ, ಬಾಗಲೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು10ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ರಸ್ತೆಗಳು, ಅಂಡರ್ ಪಾಸ್ ಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಲವೊಂದು ಅಂಡರ್ ಪಾಸ್ ಗಳಲ್ಲಿ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಲವೆಡೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹಲವೆಡೆ ಮರ, ರೆಂಬೆ- ಕೊಂಬೆಗಳನ್ನು ತರೆವುಗೊಳಿಸಲು ಪೊಲೀಸರು, ಪಾಲಿಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ವಿಶ್ವಪ್ರಿಯ ಬಡಾವಣೆ, ಗಾಂಧಿಬಜಾರ್ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದವು. ಕಾಟನ್‌ಪೇಟೆ, ಚಾಮರಾಜಪೇಟೆ, ವಿದ್ಯಾಪೀಠ, ಮೆಜೆಸ್ಟಿಕ್, ಸಂಪಂಗಿರಾಮನಗರ, ಕೋರಮಂಗಲ, ಮಲ್ಲೇಶ್ವರ, ಗಿರಿನಗರ, ಶ್ರೀನಗರ, ಯಶವಂತಪುರ, ನಂದಿನಿ ಲೇಔಟ್, ಸಿ.ವಿ.ರಾಮನ್‌ನಗರ, ಬೊಮ್ಮನಹಳ್ಳಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದ್ದು, ಜನ – ಜೀವನ ಅಸ್ತವ್ಯಸ್ಥಗೊಂಡಿದೆ.