ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ ಮಿಂಚಿದ ಕನ್ನಡತಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಸಿನಿಮಾದಲ್ಲಿ ನಟಿಸಿದ್ದ ಇತಿ ಆಚಾರ್ಯ ಇಲ್ಲಿವರೆಗೂ ಯಾರೂ ಮಾಡಿರದ ಸಾಧನೆಯೊಂದನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ. ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್ ವುಡ್ ನಟಿ ಎಂಬ ಹಿರಿಮೆಗೆ ಇತಿ ಪಾತ್ರವಾಗಿದ್ದಾರೆ.
ಇತ್ತೀಚೆಗೆ ನ್ಯೂಯಾರ್ಕ್ ನಲ್ಲಿ ನಡೆದ ನ್ಯೂಯಾರ್ಕ್ ಫ್ಯಾಶನ್ ವೀಕ್ ನಲ್ಲಿ ಭಾರತ ಮೂಲದ ಫ್ಯಾಶನ್ ಡಿಸೈನರ್ ಡಿಸೈನ್ ಮಾಡಿದ ಡ್ರೆಸ್ ಇತಿ ಶೋ ಕೇಸ್ ಮಾಡಿದ್ದಾರೆ. ಇದನ್ನು ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ತನ್ನ ಹೋಲ್ಡಿಂಗ್ಸ್ ನಲ್ಲಿ ಹಾಕುವ ಮೂಲಕ ಮೊದಲ ಬಾರಿಗೆ ಕನ್ನಡದ ನಟಿಯನ್ನು
ಗುರುತಿಸಿದೆ. ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಅಂತರಾಷ್ಟ್ರೀಯ ವೇದಿಕೆಯಾಗಿದ್ದು ಸಾಮಾನ್ಯವಾಗಿ ಬಾಲಿವುಡ್ ನಟಿಮಣಿಯರೇ ಈ ಹೋಲ್ಡಿಂಗ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ರು. ಕನ್ನಡದ ನಟಿಮಣಿ ಈ ಹೋಲ್ಡಿಂಗ್ಸ್ ನಲ್ಲಿ ಮಿಂಚಿದ್ದು ಇದೇ ಮೊದಲು ಅನ್ನೋದೇ ವಿಶೇಷ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ದೇಶವನ್ನು ಪ್ರತಿನಿಧಿಸಿದ್ದು ಹರುಷ ತಂದಿದೆ ಎನ್ನುತ್ತಾರೆ ಇತಿ ಆಚಾರ್ಯ.
ಈ ಬಾರಿಯ ಕ್ಯಾನಿಸ್ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ರು ಈ ಕನ್ನಡತಿ. ಇದೀಗ ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಮೂಲಕ ಇತಿ ಒಂದೇ ವರ್ಷದಲ್ಲಿ ಎರೆಡೆರಡು ಅಂತರಾಷ್ಟ್ರೀಯ ವೇದಿಕೆ ಹಂಚಿಕೊಂಡ ಸಾಧನೆ ಮಾಡಿದ್ದಾರೆ.
ನಟಿ ಹಾಗೂ ಮಾಡೆಲ್ ಆಗಿರುವ ಇತಿ 2016ರ ಮಿಸ್ ಸೌತ್ ಇಂಡಿಯಾ ವಿನ್ನರ್ ಕೂಡ ಹೌದು. ಆರ್ ವಿ ಎಸ್ ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ನಟನೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಇತಿ ನಾಯಕಿಯಾಗಿ ನಟಿಸಿರುವ ಕನ್ನಡದ ಲಕ್ಷ್ಮೀಪುತ್ರ ಚಿತ್ರ ಬಿಡುಗಡೆಯಾಗಬೇಕಿದೆ. ಕೇವಲ ಕನ್ನಡವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.