ರಾಜ್ಯದಲ್ಲಿ ಉತ್ಪಾದಿಸುವ ಆಮ್ಲಜನಕ ರಾಜ್ಯದಲ್ಲೇ ಬಳಕೆಗೆ ಕೇಂದ್ರದ ತಾತ್ವಿಕ ಒಪ್ಪಿಗೆ: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು : ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಕೆಗೆ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು ಅಧಿಕೃತ ಆದೇಶ ಸದ್ಯದಲ್ಲೇ ಹೊರಬೀಳಲಿದೆ ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವ ಜಗದೀಶ್ ಶೆಟ್ಟರ್ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೇಂದ್ರ ಸಚಿವರುಗಳಾದ ಪಿಯೂಶ್ ಗೋಯೆಲ್, ಪ್ರಹ್ಲಾದ್ ಜೋಶಿ ಹಾಗೂ ಸದಾನಂದಗೌಡ ಅವರೊಂದಿಗೆ ಹಲವಾರು ಹಂತದಲ್ಲಿ ಮಾತುಕತೆಯನ್ನು ನಡೆಸಿದ್ದೇವು.
ಅಲ್ಲದೆ, ಹಲವಾರು ಪತ್ರಗಳನ್ನು ಬರೆಯಲಾಗಿತ್ತು. ಈ ಮಾತುಕತೆ ಮತ್ತು ಸಮಾಲೋಚನೆಗೆ ಫಲ ದೊರೆತಿದೆ. ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕ ವನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆಯನ್ನು ನೀಡಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಹಳಷ್ಟು ನೆರವು ದೊರಕುತ್ತಿದೆ. ಕೇಂದ್ರ ಸರಕಾರ ಬಹ್ರೇನ್ ಮತ್ತು ಕುವೈತ್ ನಿಂದ 180 ಮೆಟ್ರಿಕ್ ಟನ್ ಆಮ್ಲಜನಕವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, ರೈಲು ಮೂಲಕ ಮೇ 11 ರಂದು ಜಮ್‌ಶೇಡ್‌ಪುರದಿಂದ 120 ಎಂ.ಟಿ, ಮೇ 15 ರಂದು ಕಳಿಂಗಾನಗರದಿಂದ 180 ಎಂ.ಟಿ ಆಮ್ಲಜನಕ ಸರಬರಾಜು ಆಗಿದೆ.
ಅಲ್ಲದೆ, ಮುಂದಿನ ಒಂದು ವಾರದಲ್ಲಿ ಸುಮಾರು 320 ದ್ರವೀಕೃತ ಆಮ್ಲಜನಕ ರವಾನೆ ಆಗುವ ನಿರೀಕ್ಷೆ ಇದೆ. 200 ಸಿಲಿಂಡರ್‌ಗಳನ್ನು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿದೆ.
ರಾಜ್ಯದಿಂದ ತೆಲಂಗಾಣಕ್ಕೆ ರವಾನೆ ಆಗುತ್ತಿರುವ 145 ಎಂ.ಟಿ, ಆಂಧ್ರಪ್ರದೇಶಕ್ಕೆ 63 ಎಂ.ಟಿ ಮತ್ತು ಮಹರಾಷ್ಟ್ರಕ್ಕೆ 40 ಎಂ.ಟಿಗಳಷ್ಟು ರವಾನೆ ಮಾಡಲಾಗುತ್ತಿದೆ. ಇದನ್ನು ರಾಜ್ಯದಲ್ಲೇ ಬಳಸಿಕೊಳ್ಳಲು ಅನುವು ಮಾಡಿಕೊಡಲು ಕೇಂದ್ರ ಸರಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
ಅಧಿಕೃತ ಆದೇಶ ಹೊರಬಿದ್ದ ನಂತರ ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಹಂಚಿಕೆ ಆಗಿರುವ ಆಮ್ಲಜನಕ ಸಾಗಾಣಿಕೆಯಲ್ಲಿ ಆಗುತ್ತಿರುವ ವಿಳಂಬ ತಪ್ಪುತ್ತದೆ ಎಂದು ಹೇಳಿದರು.
ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರೀಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ರಾಜ್ಯಕ್ಕೆ 1400 ರಿಂದ 1700 ಮೆಟ್ರಿಕ್ ಟನ್‌ಗಳಷ್ಟು ಆಮ್ಲಜನಕದ ಅವಶ್ಯಕತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ 7 ದಿನಗಳಲ್ಲಿ ಸರಾಸರಿ 880 ಮೆಟ್ರಿಕ್ ಟನ್‌ನಷ್ಟು ಬಳಕೆ ಆಗುತ್ತಿದೆ. ಅಲ್ಲದೆ, ನಿನ್ನೆ 66.7 (18-05-2021) ಮೆಟ್ರಿಕ್ ಟನ್ ನಷ್ಟು ಕೊರತೆಯೂ ಕಂಡುಬಂದಿದೆ ಎಂದರು.