ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ : ಆ.15 ರಿಂದ ಜಾಗೃತಿ ಜಾಥಾ
ಬೆಂಗಳೂರು : ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಒತ್ತಾಯಿಸಿ ಜಾಗೃತಿ ಜಾಥಾ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಆಗಸ್ಟ್ 15ರಿಂದ ಸೆಪ್ಟಂಬರ್ 30ರವರೆಗೆ ಜಾಗೃತಿ ಜಾಥಾ ನಡೆಸುತ್ತೇವೆ. ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಿಂದ ಜಾಥಾ ಆರಂಭವಾಗಲಿದೆ ಎಂದು ಪಂಚಮಸಾಲಿ ಜಗದ್ಗುರು ಜಯ ಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಕಾಣದ ಕೈಗಳ ಒತ್ತಡದಿಂದ ಅವಕಾಶ ಕೈ ತಪ್ಪಿದೆ. ಇದು ಸಮಾಜ ಬಾಂಧವರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಆಗಿರುವ ಅನ್ಯಾಯ ಸರಿಪಡಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಮಾಜಕ್ಕೆ ಉನ್ನತ ಅವಕಾಶ ಕಲ್ಪಿಸಲು ಒತ್ತಾಯಿಸುತ್ತೇವೆ. ಇದನ್ನು ಕಡೆಗಣಿಸಿದ್ರೆ ಮುಂಬರುವ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸಮಾಜದವರು ತಮ್ಮ ಅಸಮಾಧಾನ ತೋರಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಉತ್ತರ ಕರ್ನಾಟಕದವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಮೊದಲು ಪ್ರೇರಣೆ ಕೊಟ್ಡವರೇ ನಾವು ಎಂದ ಶ್ರೀಗಳು, ನಮಗೆ ಮೀಸಲಾತಿ ತಪ್ಪಿಸಿದ ಅತೃಪ್ತ ಮನಸ್ಸುಗಳೇ ಈಗ ನಮ್ಮ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ಅಗೌರವವಾಗಿದೆ, ಅಸಮಾಧಾನವಾಗಿದೆ. ಅದಕ್ಕೆ ಯಾರು ಕಾರಣ ಅಂತಾ ಬಿಜೆಪಿ ವರಿಷ್ಟರೇ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.