Jagdeep Dhankhar – ಉಪ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಅಭ್ಯರ್ಥಿಯಾಗಿ ಜಗದೀಪ್ ಧಂಖರ್ ಆಯ್ಕೆ…
ಭಾರತೀಯ ಜನತಾ ಪಕ್ಷ ಉಪ ರಾಷ್ಟ್ರಪತಿ ಚುನಾವಣೆಗೆ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ರನ್ನು ತನ್ನ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪಶ್ಚಿಮ ಬಂಗಾಳದ ಹಾಲಿ ರಾಜ್ಯಪಾಲರಾಗಿರುವ ಜಗದೀಪ್ ಧಂಖರ್ ರನ್ನು ಉಪ ರಾಷ್ಟ್ರಪತಿ ಚುನಾವಣೆ ಎನ್ ಡಿಎ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ಮುಂದಿನ ಉಪರಾಷ್ಟ್ರಪತಿ ಆಯ್ಕೆಗೆ ಆಗಸ್ಟ್ 6 ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮ0ತ್ತು ರಾಜ್ಯಸಭೆಯ ಸದಸ್ಯರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಜುಲೈ 5 ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿರುತ್ತದೆ. ಜುಲೈ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ ಮತ್ತು ಉಮೇದುವಾರಿಕೆಯನ್ನು ಹಿಂಪಡೆಯಲು ಜುಲೈ 22 ಕೊನೆಯ ದಿನಾಂಕವಾಗಿದೆ.
ಹಾಲಿ ಎಂ ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ 10 ರಂದು ಕೊನೆಗೊಳ್ಳುತ್ತದೆ. ಉಪರಾಷ್ಟ್ರಪತಿ ಅವರು ರಾಜ್ಯಸಭೆಯ ಅಧ್ಯಕ್ಷರೂ ಆಗಿರುತ್ತಾರೆ.