ನವರಸನಾಯಕ ಜಗ್ಗೇಶ್ ಮತ್ತೆ ಪ್ರೀಮಿಯರ್ ಪದ್ಮಿನಿ ಏರಿ ಜಾರಿ ರೈಡ್ ಹೊರಡೋಕೆ ಸಿದ್ಧರಾಗಿದ್ದಾರೆ. ರಮೇಶ್ ಇಂದಿರಾ ನಿರ್ದೇಶಿಸಿ, ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಕಳೆದ ವರ್ಷ ರಿಲೀಸ್ ಆಗಿ ಬೊಂಬಾಟ್ ಪ್ರದರ್ಶನ ಕಂಡಿತ್ತು. ಸಿನಿಮಾದಲ್ಲಿ ಯಾವುದೇ ಆರ್ಭಟ ಇಲ್ಲದಿದ್ದರೂ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಇನ್ನು ಚಿತ್ರದಲ್ಲಿ ಜಗ್ಗೇಶ್, ಪ್ರಮೋದ್, ಸುಧಾರಾಣಿ, ಮಧು, ಹಿತಾ ಚಂದ್ರಶೇಖರ್, ದತ್ತಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಈ ಚಿತ್ರದ ಸೀಕ್ವೆಲ್ ಗೆ ತಯಾರಿ ನಡೆದಿದೆ.
ಸೀಕ್ವೆಲ್ ಮೂಲಕ ನವರಸ ನಾಯಕ ಜಗ್ಗೇಶ್ ಮತ್ತೊಮ್ಮೆ ಪ್ರೀಮಿಯರ್ ಪದ್ಮಿನಿ ಏರಲಿದ್ದಾರೆ. ಇದರಲ್ಲೂ ಬಹುತೇಕ ಅದೇ ತಾರಾಗಣ ಮತ್ತು ತಂತ್ರಜ್ಞರ ತಂಡ ಕೆಲಸ ಮಾಡಲಿದೆ. ಲಾಕ್ ಡೌನ್ ನಡುವೆಯೇ ಪ್ರೀಮಿಯರ್ ಪದ್ಮಿನಿ ಮುಂದುವರೆದ ಭಾಗದ ಕಥೆಯನ್ನ ಸಿದ್ಧಪಡಿಸಲಾಗಿದೆ. ಪ್ರೀ ಪ್ರೊಡಕ್ಷನ್ ವರ್ಕ್ ಸಹ ನಡೀತಿದೆ. ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿ ಪ್ರೀಮಿಯ್ ಪದ್ಮಿನಿ ಸೀಕ್ವೆಲ್ ನಲ್ಲಿ ನಟಿಸೋಕ್ಕೆ ಉತ್ಸುಕರಾಗಿರೋದಾಗಿ ತಿಳಿಸಿದ್ದಾರೆ.
ಸದ್ಯ ಲಾಕ್ ಡೌನ್ ನಿಂದ ಸಿನಿಮಾ ಶೂಟಿಂಗ್ ಮತ್ತು ಪ್ರದರ್ಶನಕ್ಕೆ ಅನುಮತಿ ಇಲ್ಲ. ಸ್ಕ್ರಿಪ್ಟ್ ರೆಡಿಯಾಗಿದ್ದು, ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ನಡೀತಿದ್ದು, ಸರ್ಕಾರ ಶೂಟಿಂಗ್ ಅನುಮತಿ ನೀಡಿದ ತಕ್ಷಣ ಪ್ರೀಮಿಯರ್ ಪದ್ಮಿನಿ ಸೆಟ್ಟೇರಲಿದೆ.








