SSLc ಫಲಿತಾಂಶ ಏನೆ ಬರಲಿ ಮಕ್ಕಳ ಸಿಂಹದಂತೆ ಸಾಕಿ : ಜಗ್ಗೇಶ್
ಬೆಂಗಳೂರು : ಎಸ್ ಎಸ್ ಎಲ್ ಸಿಯಲ್ಲಿ ಸೆಕೆಂಡ್ ಕ್ಲಾಸ್ ಪಡೆದಿದ್ದಕ್ಕೆ ಬೂಟು ಕಾಲಿನಲ್ಲಿ ಹೊಡೆಸಿಕೊಂಡು ಅವಮಾನದಿಂದ ನಟ ಜಗ್ಗೇಶ್ ಅವರು ಆತ್ಮಹತ್ಯೆಗೆ ಯತ್ನಿಸದ್ದರಂತೆ. ಈ ವಿಚಾರವನ್ನು ಸ್ವತಃ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ತಮ್ಮ ಎಸ್ಎಸ್ಎಲ್ ಸಿ ಮಾಕ್ರ್ಸ್ ಕಾರ್ಡ್ ನನ್ನು ಶೇರ್ ಮಾಡಿಕೊಂಡಿರುವ ಜಗ್ಗೇಶ್, ಅಂದು ಈ ಜಗ್ಗೇಶ ಶಾಲೆಯಲ್ಲಿ ಈಶ್ವರ! ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ! ಅದು ನನ್ನ ಚಿಂತನೆಯ ಚಿತೆಯಾಯಿತು!
ಪರೀಕ್ಷೆ ಅರ್ಧಮನಸ್ಸಲ್ಲೆ ಓದಿಬರೆದೆ! ಯಾಕೋ ಕನ್ನಡಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು! ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ! ಬಾಲ್ಯದಿಂದ ಕನ್ನಡಭಾಷ ಪ್ರೀತಿ ಹುಟ್ಟಿದರೆ ಸಾಯುವವರೆಗು ಅದು ಅವನ ಹೃದಯದ ನಾಡಿಬಡಿತದಂತೆ ಜೊತೆ ಉಳಿಯುತ್ತದೆ! ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮಧ್ರೋಹವಾಗುತ್ತದೆ!
ಈ ಅಂಕ ನೋಡಿದ ಅಪ್ಪ ನಡುರೋಡಲ್ಲಿ ಜನನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು! ಅಪಮಾನ ಸಹಿಸಲಾಗದೆ ಆತ್ಮಹತ್ಯಗೆ ಯತ್ನಿಸಿದ್ದೆ! ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ (ಆ ದಿನಗಳು ಕುಖ್ಯಾತಿ) ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ! ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಇಟ್ಟು ಪಶ್ಚಾತಾಪಪಟ್ಟರು!

ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ! ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ!
ತಂದೆತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳಸದೆ ಜಗದಪಾಠ ಕಲಿಸುವ ಯತ್ನಮಾಡಿ! ಓದಿದ ಮಕ್ಕಳು ಸರ್ಕಸ್ ಸಿಂಹದಂತೆ ಓದಿನ ಜೊತೆಗೆ ಜಗದಪಾಠ ಕಲಿತವರು ಬೇಟೆಯಾಡುವ ಕಾಡಿನಸಿಂಹದಂತೆ!
ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು ಕಾರಣ ಜಗ ಕಾಡಿನಂತೆ ಆಗಿದೆ,ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ! ಇಂಥ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ!ಕೆಣಕುವವರು ದೂರ ಉಳಿಯುತ್ತಾರೆ!
ಎಸ್ ಎಸ್ ಎಲ್ ಸಿ ಫಲಿತಾಂಶ ಏನೆ ಬರಲಿ ನಿಮ್ಮ ಮಕ್ಕಳ ಸಿಂಹದಂತೆ ಸಾಕಿ… ಮಿಕ್ಕಂತೆ ಜಗತ್ತೆ ಮನುಜನಿಗೆ ಜೀವನಪಾಠ ಕಲಿಸುತ್ತದೆ ಎಂದು ಬರೆದುಕೊಂಡಿದ್ದಾರೆ.






