3 LET ಉಗ್ರರು ಉಡೀಸ್ – 36 ಗಂಟೆಯಲ್ಲಿ 4 ಉಗ್ರರನ್ನ ಸದೆಬಡಿದ ಸೇನೆ….
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಶನಿವಾರ ಸಂಜೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕನ್ನ ಹೊಡೆದುರುಳಿಸಲಾಗಿದೆ. ಪುಲ್ವಾಮಾದ ದ್ರಾಬ್ಗಾಮ್ ನಲ್ಲಿ 2-3 ಭಯೋತ್ಪಾದಕರು ಅಡಗಿರುವ ಮಾಹಿತಿ ತಿಳಿದು ಬಂದ ನಂತರ ಸೇನೆ ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದೆ.
ಶನಿವಾರ ತಡರಾತ್ರಿ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದ್ದು, ಭಾನುವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಇತರ ಇಬ್ಬರು ಉಗ್ರರನ್ನ ಹೆಡೆಮುರಿ ಕಟ್ಟಲಾಗಿದೆ. ಕಾರ್ಯಾಚರಣೆಯ ಪ್ರದೇಶದಲ್ಲಿ ಎರಡು ಎಕೆ -47 ರೈಫಲ್‌ಗಳು, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ ಹತರಾಗಿರುವ ಎಲ್ಲಾ ಭಯೋತ್ಪಾದಕರು ಸ್ಥಳೀಯರಾಗಿದ್ದು, ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿದ್ದಾರೆ. ಅವರಲ್ಲಿ ಒಬ್ಬನನ್ನು ಜುನೈದ್ ಶಿರ್ಗೋಜ್ರಿ ಎಂದು ಗುರುತಿಸಲಾಗಿದ್ದು, ಈತ ಮೇ 13 ರಂದು ಕಾನ್‌ಸ್ಟೆಬಲ್ ರಿಯಾಜ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾಗಿದ್ದ. ಇನ್ನಿಬ್ಬರು ಉಗ್ರರನ್ನು ಪುಲ್ವಾಮಾ ಜಿಲ್ಲೆಯ ಫಾಜಿಲ್ ನಜೀರ್ ಭಟ್ ಮತ್ತು ಇರ್ಫಾನ್ ಮಲಿಕ್ ಎಂದು ಗುರುತಿಸಲಾಗಿದೆ.
ಕಳೆದ 36 ಗಂಟೆಯಲ್ಲಿ 4 ಉಗ್ರರು ಹತ
ಕಣಿವೆಯಲ್ಲಿ ಕಳೆದ 36 ಗಂಟೆಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಶನಿವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನ ಖಂಡಿಪೋರಾ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.
ಮಂಗಳವಾರ ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಅದೇ ಪ್ರದೇಶದಲ್ಲಿ ಭದ್ರತಾ ಪಡೆಗಳು 24 ಗಂಟೆಗಳ ಒಳಗೆ ಮೂರು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರನ್ನ ಸದೆಬಡೆದಿದ್ದರು.