ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತನಿಗೆ ಚಾಕು ಇರಿದ ಪ್ರಕರಣವೊಂದು ನಡೆದಿದೆ.
ಬಿಜೆಪಿ (BJP) ರಾಜ್ಯಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ (Pruthvi Singh) ಮೇಲೆ ಚಾಕು ಇರಿತವಾಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಚನ್ನರಾಜ್ (Channaraj) ಹಟ್ಟಿಹೊಳ್ಳಿ ಆಪ್ತರು ಈ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸದ್ದಾಂ, ಸುಜಯ್ ಜಾಧವ್ ಮತ್ತು ಚನ್ನರಾಜ್ ಅವರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪೃಥ್ವಿ ಸಿಂಗ್ ಮನೆಗೆ ಏಕಾಏಕಿ ಬಂದ ಆರೋಪಿಗಳು ಕೆಲಹೊತ್ತು ಮಾತಿನ ಚಕಮಕಿ ನಡೆಸಿದ್ದರು ಎನ್ನಲಾಗಿದೆ. ಈಗ ಪೃಥ್ವಿ ಸಿಂಗ್ಗೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ನನ್ನ ಸಹೋದರನ ಜೊತೆಗೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಇದರ ಹಿಂದೆ ಯಾರು ಇದ್ದಾರೆ? ಇದು ಷಡ್ಯಂತ್ರವೋ, ರಾಜಕೀಯ ಪ್ರೇರಿತವೋ ಎಂಬುವುದು ತಿಳಿಯಬೇಕಿದೆ ಎಂದು ಹೇಳಿದ್ದಾರೆ.