Jayamruthyunjaya Swamiji | ಯತ್ನಾಳ್ ಪಂಚಮಸಾಲಿ ಸಮುದಾಯದ ನಾಯಕರು
ಬೆಳಗಾವಿ : ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಬೇಸರ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ನಮ್ಮ ಸಮುದಾಯದ ಎಲ್ಲಾ ಶಾಸಕರು ಬೆಂಬಲ ನೀಡಿದ್ದಾರೆ.
ಯತ್ನಾಳ್ ಗೌಡರಿಗೆ ಬದ್ಧತೆ ಇದೆ. ಮಂತ್ರಿ ಸ್ಥಾನ ತ್ಯಾಗ ಮಾಡಿ ಸಮಾಜಕ್ಕಾಗಿ ಹೋರಾಟ ಮಾಡುತ್ತೇವೆ.
ಎಷ್ಟೇ ತೊಂದರೆ, ಅಡೆತಡೆ ಬಂದ್ರು ಹೋರಾಟ ಮಾಡಿದ್ದಾರೆ. ಮಂತ್ರಿ ಸ್ಥಾನ ಬೇಡ ಮೀಸಲಾತಿ ಕೊಡಿ ಎಂದು ಬದ್ಧತೆ ಪ್ರದರ್ಶನ ಮಾಡಿದ್ದಾರೆ.

ಈ ಬದ್ಧತೆ ಯಾರಿಗೂ ಬರಲು ಸಾಧ್ಯವಿಲ್ಲ. ಅರುಣ್ ಸಿಂಗ್ ಗೆ ಕರ್ನಾಟಕ ಬಗ್ಗೆ ಮಾಹಿತಿ ಇಲ್ಲ. ರಾಜ್ಯದಲ್ಲಿ ಪಂಚಮಸಾಲಿಗಳು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದಾರೆ. ಇಡೀ ಸಮಾಜದ ಜನರಿಗೆ ನಿರಾಸೆ ಉಂಟು ಮಾಡಬಾರದು.
ನಾಯಕರು, ಕಾರ್ಯಕರ್ತರನ್ನು ಅಗೌರವ ತೋರಿಸಬಾರದು. ನಮ್ಮ ಸಮಾಜದ ಜನರಿಗೆ ಸಿಂಗ್ ಹೇಳಿಕೆಯಿಂದ ನೋವು ಆಗಿದೆ ಎಂದಿದ್ದಾರೆ.
ಇನ್ನು ಅರುಣ್ ಸಿಂಗ್ ಅವರಿಗೆ ಪಕ್ಷದ ನಾಯಕರು ತಾಕೀತು ಮಾಡಬೇಕು. ಅಕ್ಟೋಬರ್ 21 ರಂದು ನಾಯಕರು ಯಾರು ಎಂದು ಘೋಷಣೆ ಮಾಡುತ್ತೇವೆ.
ಹುಲಿ ಯಾವತ್ತು ಹುಲಿನೇ, ಯತ್ನಾಳ್ ಪಂಚಮಸಾಲಿ ಸಮುದಾಯದ ನಾಯಕರಾಗಿದ್ದಾರೆ. 21 ರಂದು ಶಕ್ತಿ ಪ್ರದರ್ಶನ ಮೂಲಕ ಯಾರು ನಾಯಕ ಎಂದು ತೋರಿಸುತ್ತೇವೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.