ಬೆಂಗಳೂರು : ಕೊರೊನಾ ವೈರಸ್ ಕಾಟದ ಮಧ್ಯೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಹಿಂದೆ ದೋಸ್ತಿಗೆ ಜೈ ಎಂದು ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಈಗ ಮತ್ತೆ ಹೊಂದಾಗಲಿವೆ. ಈ ಬಗ್ಗೆ ಎರಡು ಪಕ್ಷಗಳ ನಾಯಕರು ಸುಳಿವು ನೀಡಿದ್ದು, ಈ ವಿಚಾರವಾಗಿ ಮಾತುಕತೆ ನಡೆಯುತ್ತಿದೆ.
ಈ ಮೈತ್ರಿ ಹಿರಿಯ ನಾಯಕರಿಗಾಗಿ
ಹೌದು..! ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಒಂದಾಗುತ್ತಿರೋದು ಹಿರಿಯ ನಾಯಕರಿಗಾಗಿ. ರಾಜ್ಯಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ದೋಸ್ತಿ ಮಾಡಿಕೊಳ್ಳಲು ಮತ್ತೊಮ್ಮೆ ಮುಂದಾಗಿವೆ. ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್ ನಿಂದ ದೇವೇಗೌಡರು ಆಯ್ಕೆ ಬಯಸಿದ್ದಾರೆ. ಹೀಗಾಗಿ ಸೋನಿಯಾ ಗಾಂಧಿ ಅವರ ವಿಡಿಯೋ ಸಂವಾದದಲ್ಲಿ ಖರ್ಗೆ ಮತ್ತು ದೇವೇಗೌಡ ಇಬ್ಬರು ಭಾಗವಹಿಸಿದ್ದರು.
ಸುಳಿವು ನೀಡಿದೇ ಈ ಘಟನೆ
ರಾಜ್ಯದಲ್ಲಿ ದಳಪತಿಗಳ ಜೊತೆ ಕೈ ಕಲಿಗಳು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದು ಹೆಚ್ ಡಿಡಿ ಬರ್ತ್ ಡೇ ಯಂದು ಡಿಕೆಶಿ ಭೇಟಿ. ಅಂದರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹುಟ್ಟುಹಬ್ಬದಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು, ಹೆಚ್ ಡಿಡಿ ನಿವಾಸಕ್ಕೆ ತೆರಳಿ ವಿಶ್ ಮಾಡಿದ್ದರು. ಈ ವೇಳೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ರಾಜ್ಯಸಭೆಗೆ ಆಯ್ಕೆಯಾಗಲು ಹೆಚ್ ಡಿಡಿ ಆಯ್ಕೆ ಆಗಲು 45 ಸದಸ್ಯರ ಅವಶ್ಯಕತೆಯಿದೆ. ಜೆಡಿಎಸ್ ಕೇವಲ 34 ಸದಸ್ಯರನ್ನು ಹೊಂದಿದ್ದು, ಸ್ವಂತ ಶಕ್ತಿಯಿಂದ ಜೆಡಿಎಸ್ ಗೆ ಇದು ಸಾಧ್ಯವಿಲ್ಲ. ಹೀಗಾಗಿ ಜೆಡಿಎಸ್ ಉಳಿದ ಮತಗಳಿಗಾಗಿ ಕಾಂಗ್ರೆಸ್ ಸಹಾಯ ಬೇಕಿದೆ. ಈ ಹಿನ್ನೆಲೆ ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಕೈ ಹಿಡಿಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಕಾಂಗ್ರೆಸ್ ಗೆ ಇದರಿಂದಾಗುವ ಲಾಭವೇನು?
ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರಿಂದ ಜೆಡಿಎಸ್ ಗೆ ನೂರಕ್ಕೆ ನೂರರಷ್ಟು ಲಾಭವಾಗಲಿದೆ. ಹಾಗಾದ್ರೆ ಕಾಂಗ್ರೆಸ್ ಗೇನು? ಎಂಬೋದನ್ನು ನೋಡೋದಾದ್ರೆ.. ಇದಕ್ಕೆ ಸಿಗೋ ಉತ್ತರ ವಿಧಾನ ಪರಿಷತ್ ಚುನಾವಣೆ.
ಹೌದು..! ರಾಜ್ಯಸಭೆಯಲ್ಲಿ ಕಾಂಗ್ರೆಸ್ ನೆರವು ಪಡೆಯುವ ಜೆಡಿಎಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನೆರವಿನ ಹಸ್ತ ನೀಡಲಿದೆ. 16 ಪರಿಷತ್ ಸ್ಥಾನಗಳಲ್ಲಿ ಪದವೀದರ ಮತ್ತು ಶಿಕ್ಷಕರ 4 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಸ್ವೀಪ್ ಮಾಡುವುದನ್ನು ತಡೆಯಲು ಯತ್ನಿಸುತ್ತಿವೆ. ಈ ಮೂಲಕ ಮೇಲ್ಮನೆಯಲ್ಲಿ ಬಿಗಿ ಹಿಡಿತ ಸಾಧಿಸಲು ದೋಸ್ತಿಗಳು ಮುಂದಾಗಿದ್ದಾರೆ.








