ದಳಪತಿಗಳ ಆಶೀರ್ವಾದ ಪಡೆದವರಿಗೆ ವಿಧಾನ ಪರಿಷತ್ ಜೆಡಿಎಸ್ ಟಿಕೆಟ್ ಫಿಕ್ಸ್ !!
ಬೆಂಗಳೂರು : ರಾಜ್ಯದ ವಿಧಾನ ಪರಿಷತ್ ಏಳು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಜೂನ್ 29 ಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಅದರ ಬೆನ್ನೆಲೆ ತಮ್ಮ ತಮ್ಮ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕೆಲವರು ಲಾಭಿ ನಡೆಸುತ್ತಿದ್ದಾರೆ. ವಿಧಾನ ಪರಿಷತ್ ಏಳು ಸ್ಥಾನಗಳಲ್ಲಿ ಬಿಜೆಪಿ 4, ಕಾಂಗ್ರೆಸ್ 2, ಹಾಗೂ ಜೆಡಿಎಸ್ 1 ಸ್ಥಾನ ಸಿಗಲಿದೆ.
ಈಗಾಗಲೇ ಬಿಜೆಪಿ ರಾಜ್ಯಸಭೆ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಚ್ಚರಿ ಮೂಡಿಸಿದೆ. ವಿಧಾನ ಪರಿಷತ್ ಟಿಕೆಟ್ ವಿಚಾರದಲ್ಲೂ ಅದೆ ಬಿಜೆಪಿ ಅನುಸರಿಸುತ್ತೆ ಎಂಬ ಮಾತುಗಳು ಕೇಳಿಬಂದಿವೆ.
ಇನ್ನೂ ಕಾಂಗ್ರೆಸ್ ಪಾಲಿನ ಎರಡು ಸ್ಥಾನಗಳಿಗೆ ಟಿಕೆಟ್ ಯಾರಿಗೆ ನೀಡಬೇಕು ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಯಾಕೆಂದರೆ ಕಾಂಗ್ರೆಸ್ ನಲ್ಲಿ ಮಾಜಿ ಮಂತ್ರಿಗಳು ಹಾಗೂ ಕೇಂದ್ರ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದವರೇ ಟಿಕೆಟ್ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಜೆಡಿಎಸ್ ಪಾಲಿನ ಒಂದು ಸ್ಥಾನಕ್ಕೆ ಹಲವರು ಕಣ್ಣು ಇಟ್ಟಿದ್ದಾರೆ. ಕುಪೇಂದ್ರ ರೆಡ್ಡಿ, ಟಿ.ಏ ಶರವಣ, ಜೆಡಿಎಸ್ ಬೆಂಗಳೂರು ನಗರ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಜಣ್ಣ ಪೈಪೋಟಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಜೆಡಿಎಸ್ ನಲ್ಲಿ ವರಿಷ್ಠ ಹೆಚ್.ಡಿ.ದೇವೇಗೌಡರ ತೀರ್ಮಾನವೇ ಅಂತಿಮವಾಗಿರುತ್ತದೆ. ದೊಡ್ಡಗೌಡರ ಆಶೀರ್ವಾದ ಯಾರ ಮೇಲೆ ಇರುತ್ತದೆಯೋ ಅವರಿಗೆ ಟಿಕೆಟ್ ಪಕ್ಕಾ ಎಂದು ಹೇಳಾಗುತ್ತಿದೆ.
ಆ ಹಿನ್ನೆಲೆಯಲ್ಲಿ ನೋಡಿದ ಮೊದಲಿಂದಲೂ ಟಿ.ಎ. ಶರವಣ ಹೆಚ್.ಡಿ.ದೇವೇಗೌಡರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಬಾರಿಯು ಪಡೆಯುವ ಸಾದ್ಯತೆಯಿದೆ ಎಂದು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ ಟಿಕೆಟ್ ಫೈನಲ್ ಮಾಡುವುದು ಅಷ್ಟು ಸುಲಭವಿಲ್ಲ ಯಾಕೆಂದರೆ ಈಗಾಗಲೇ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ತೊರೆದಿದ್ದಾರೆ. ಹಾಗಾಗಿ ಈ ಬಾರಿ ಟಿಕೆಟ್ ಫೈನಲ್ ಮಾಡುವು ವಿಚಾರ ಕಠಿಣವಾಗಬಹುದು. ಟಿಕೆಟ್ ಸಿಗದೆ ಹೋದರೆ ಪಕ್ಷ ತೊರೆಯುವ ಸಾಧ್ಯತೆಯಿದೆ. ಆದ್ದರಿಂದ ಈ ಬಾರಿ ಎಚ್ಚರಿಕೆ ನಡೆಯನ್ನು ಜೆಡಿಎಸ್ ಅನುಸರಿಸುತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.








