ಡ್ಯೂಪ್ಲಿಕೆಟ್ ಒಡೆವೆ ಖರೀದಿಸಿದಕ್ಕೆ ಪತ್ನಿಯನ್ನು ಕೊಂದ ಪತಿ
ಬೆಂಗಳೂರು : ಒಡವೆ ಖರೀದಿ ವಿಚಾರಕ್ಕೆ ಪತಿ – ಪತ್ನಿ ನಡುವೆ ಗಲಾಟೆ ನಡೆದಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಇಂತಹದೊಂದು ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪತಿ ಬಾಡಿಗೆ ಕಟ್ಟಲು ಎತ್ತಿಟ್ಟ ಹಣವನ್ನು ಪತ್ನಿ ಒಡವೆ ಖರೀದಿಗೆ ಖರ್ಚು ಮಾಡಿದ್ದಾಳೆ. ಇದ್ರಿಂದ ಕೋಪ ಗೊಂಡ ಗಂಡ ಆಕೆಯ ಜೊತೆಗೆ ಜಗಳವಾಡಿದ್ದಾನೆ.. ಜಗಳ ಅತಿರೇಕಕ್ಕೆ ತೆರಳಿ ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ದುರ್ದೈವಿಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಈ ಘಟನೆ ನವೆಂಬರ್ 2ರಂದು ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದ. ಆದರೆ ಪತ್ನಿ ಹಣವನ್ನ ಒಡವೆ ಮೇಲೆ ಖರ್ಚು ಮಾಡಿದ್ದಾಳೆ. ಸುಮಾರು 6,500 ರೂ. ಹಣ ಖರ್ಚು ಮಾಡಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾಳೆ. ಇದ್ರಿಂದಾಗಿ ಸಿಟ್ಟಿಗೆದ್ದ ಗಂಡ ಆಕೆಯ ಕೊಲೆ ಮಾಡಿದ್ದಾನೆ.
ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಹಣ ಖರ್ಚು ಮಾಡಿರುವ ವಿಚಾರ ತಿಳಿದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಫಾರೂಕನ್ನು ಬಂಧಿಸಿದ್ದಾರೆ.