ಹುತಾತ್ಮರಾದ ಭಾರತೀಯ ಯೋಧರ ಬಲಿದಾನಕ್ಕೆ ನ್ಯಾಯ ದೊರಕಿಸಿ – ಮನಮೋಹನ್ ಸಿಂಗ್
ಹೊಸದಿಲ್ಲಿ, ಜೂನ್ 23: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತ ಸೇನೆಯ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಬಲಿದಾನಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸೇನೆಯ ಘರ್ಷಣೆಯಲ್ಲಿ ದೇಶಕ್ಕಾಗಿ 20 ಮಂದಿ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ಬಲಿದಾನ ವ್ಯರ್ಥವಾಗದಂತೆ ನೋಡಬೇಕಾಗಿದ್ದು, ಹುತಾತ್ಮರಾದ ಸೈನಿಕರಿಗೆ ನ್ಯಾಯ ಸಿಗಬೇಕು ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮನಮೋಹನ್ ಸಿಂಗ್ ಸೋಮವಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ಸ್ಥಾನದಲ್ಲಿ ಇರುವವರ ಜವಾಬ್ದಾರಿ ಬಹಳಷ್ಟಿದ್ದು, ದೇಶ ರಕ್ಷಣೆಯ ಹೊಣೆ ಅವರ ಮೇಲಿದೆ. ತಮ್ಮ ಮಾತಿನ ಬಗ್ಗೆ ಅವರು ಎಚ್ಚರಿಕೆಯಿಂದ ಇದ್ದು, ಬಳಸುವ ಪದಗಳ ಪರಿಣಾಮಗಳ ಅರಿವು ಅವರಿಗೆ ಇರಬೇಕು ಎಂದು ಸಲಹೆಯನ್ನು ಸಿಂಗ್ ಅವರು ನೀಡಿದ್ದಾರೆ. ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯೊಂದು ಚರ್ಚೆಗೆ ಕಾರಣವಾದ ಹಿನ್ನಲೆಯಲ್ಲಿ ಸಿಂಗ್ ಮಾತಿನ ಪರಿಣಾಮಗಳ ಬಗ್ಗೆ ಗಮನವಿರಲಿ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ಧಾರಗಳು ಹಾಗೂ ನಿಭಾಯಿಸುವ ಕ್ರಮಗಳನ್ನು ನಮ್ಮ ಮುಂದಿನ ಪೀಳಿಗೆ ಪರಿಶೀಲಿಸುತ್ತದೆ. ನಮ್ಮ ಭವಿಷ್ಯದ ಪೀಳಿಗೆಗಳು ನಮ್ಮನ್ನು ಹೇಗೆ ಗ್ರಹಿಸುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಖ್ಯವಾದ ಜವಾಬ್ದಾರಿ ನಿಭಾಯಿಸಲು ಹೊಣೆ ನಮ್ಮನ್ನು ಮುನ್ನಡೆಸುವವರ ಮೇಲಿರುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ಜವಾಬ್ದಾರಿ ಪ್ರಧಾನ ಮಂತ್ರಿ ಕಚೇರಿಯ ಮೇಲಿದ್ದು, ಪ್ರಧಾನಮಂತ್ರಿಗಳು ನಮ್ಮ ರಾಷ್ಟ್ರದ ಭದ್ರತೆ ಕುರಿತು ಹೇಳಿಕೆಗಳನ್ನ ನೀಡುವಾಗ ಸದಾಕಾಲ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ಚೀನಾವು ಏಪ್ರಿಲ್ ತಿಂಗಳಿನಿಂದ ಭಾರತದ ಗಡಿ ಪ್ರದೇಶಗಳಾದ ಗಾಲ್ವಾನ್ ವ್ಯಾಲಿ ಮತ್ತು ಪಾಂಗೊಂಗ್ ಸರೋವರದ ಕೆಲವು ಭಾಗಗಳನ್ನು ಆಕ್ರಮಿಸುವ ಉದ್ದೇಶದಿಂದ ಸಂಘರ್ಷದ ವಾತಾವರಣ ಉಂಟು ಮಾಡುತ್ತಿದ್ದು, ನಾವು ಅವರ ಬೆದರಿಕೆಯ ತಂತ್ರಗಳಿಗೆ ಮಣಿಯಬಾರದು. ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಮನಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.