ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಾಲಕರು – Saaksha Tv
ಬಿಹಾರ: ಆರು ಬಾಲಕರು ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯೊಂದರ ಹೊಲದಲ್ಲಿ 6 ಬಾಲಕರು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿ ಹೊಲದಲ್ಲಿ ತರಕಾರಿ ಸಂಗ್ರಹಿಸಲು ಹೋಗಿದ್ದ 8 ಮತ್ತು 9 ವರ್ಷ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ. ಕೃತ್ಯ ನಡೆದ ನಂತರ ಸಂತ್ರಸ್ತರು ತಮ್ಮ ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಬಾಲಕಿಯೊಬ್ಬರ ಆರೋಗ್ಯ ಹದಗೆಟ್ಟಿದೆ. ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಇದಾದ ನಂತರ ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರೆ ಉಳಿದವರು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಅತ್ಯಾಚಾರ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸ್ಮಾರ್ಟ್‌ಫೋನ್ ಬಳಸುವ ಮೂಲಕ ನಾವು ಇದರ ಬಗ್ಗೆ ತಿಳಿದುಕೊಂಡಿದ್ದೇವೆ ಅಂತಾ ಬಾಲಕರು ಹೇಳಿದ್ದಾರೆ.
ಬಾರ್ಬಿಘಾ ಪೊಲೀಸ್ ಠಾಣೆಯ ಮಹಿಳಾ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಂತ್ರಸ್ತೆಯರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಗಳು ನಮಗೆ 5 ರೂ ನೀಡಿದ್ದರು. ಅವರು ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದರು ಎಂದು ಅತ್ಯಾಚಾರಕ್ಕೊಳಗಾದ ಬಾಲಕಿಯರು ಇನ್ಸ್‌ಪೆಕ್ಟರ್ ಎದುರು ಹೇಳಿದ್ದಾರೆ. ಸಂತ್ರೆಸ್ತೆಯರ ಹೇಳಿಕೆ ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.








