ಶಿವಮೊಗ್ಗ, ಮೇ 22 : ವಿಶ್ವದಲ್ಲೆಡೆ ಕೊರೊನಾಸುರನ ಹೊಡೆತಕ್ಕೆ ಜನರು ತತ್ತರಿಸಿ ಹೋಗುತ್ತಿದ್ದರೇ, ಇತ್ತ ರಾಕ್ಷಸರಿಗೆ ಕೋವಿಡ್-19 ಬರೋದಿಲ್ಲ, ನನ್ನಂತವನಿಗಂತೂ ಅದು ಬರೋದೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೋವಿಡ್-19 ಎಂಬ ಭಯದಿಂದ ಶಾಸಕರು, ಸಚಿವರು, ಸಂಸದರು ಮನೆಯಲ್ಲೇ ಇದ್ದರೆ ಅಭಿವೃದ್ಧಿ ಕಾಮಗಾರಿಗಳು ನಡೆಯುವುದು ಹೇಗೆ. ಕೋವಿಡ್-19 ವನ್ನು ಎದುರಿಸುತ್ತೇನೆ ಎಂಬ ಆತ್ಮಸ್ಥೈರ್ಯ ಇರಬೇಕು. ಇದರ ಜೊತೆಗೆ ಜಾಗರೂಕತೆಯೂ ಬೇಕು. ರಾಕ್ಷಸರಿಗೆ ಕೋವಿಡ್ ಬರುವುದಿಲ್ಲ. ನನ್ನಂತವನಿಗಂತೂ ಸೋಂಕು ಬರುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಸಾಗರದಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಅವರು, ಇಡೀ ಪ್ರಪಂಚ ನರೇಂದ್ರ ಮೋದಿ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಜನ ಲಕ್ಷಾಂತರ ರೂಪಾಯಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಕೊರೊನಾ ಬಗ್ಗೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಒಂದಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥಹ ಸಂದರ್ಭದಲ್ಲಿ ಸೋನಿಯಾ ಗಾಂಧಿಯ ಹೇಳಿಕೆಯಿಂದ ಎಲ್ಲರಿಗೂ ನೋವಾಗಿದೆ ಎಂದರು.
ಇನ್ನು ಸೋನಿಯಾ ಗಾಂಧಿ ಅವರನ್ನು ತಮ್ಮ ಹೇಳಿಕೆ ವಾಪಸ್ ಪಡೆಯಲಿ ಎಂದು ನಾನು ಹೇಳುವುದಿಲ್ಲ. ಸಾಗರ ಒಬ್ಬ ವಕೀಲ ತನ್ನ ಕೆಲಸವನ್ನು ತಾನು ಮಾಡಿದ್ದಾನೆ. ಸಬ್ ಇನ್ಸ್ ಪೆಕ್ಟರ್ ಎಫ್ ಐಆರ್ ಹಾಕಿರುವುದು ಸರಿಯೋ ತಪ್ಪೋ ಎಂಬುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದಿದ್ದಾರೆ ಈಶ್ವರಪ್ಪ.
ಎಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರು ಪಿಎಂ ಕೇರ್ ಫಂಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬರೆದಿದೆ. ಅಲ್ಲದೆ ಪಿಎಂ ಕೇರ್ ಫಂಡ್ ಫ್ರಾಡ್ ಎಂದು ಟೀಕಿಸಿದೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಸಾಗರದ ವಕೀಲ ಪ್ರವೀಣ್ ಎಂಬುವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಸಾಗರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ಕೈಬಿಡಬೇಕೆಂದು ಕೆಪಿಸಿಸಿ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.