ಕಮಲ ಕೊತ ಕೊತ : ರಾಜಾಹುಲಿ ವಿರುದ್ಧ ತೊಡೆತಟ್ಟಿದ ಕೆ.ಎಸ್.ಈಶ್ವರಪ್ಪ..!
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಯತ್ನಾಳ್ ಬಳಿಕ ಕೆ.ಎಸ್.ಈಶ್ವರಪ್ಪ ಸಿಡಿದೆದ್ದಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆ.ಎಸ್.ಈಶ್ವರಪ್ಪ ಲಿಖಿತ ರೂಪದಲ್ಲಿ ಹೈಕಮಾಂಡ್ ಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಈಶ್ವರಪ್ಪ, ಕಳೆದ ಒಂದುವರೆ ವರ್ಷದಿಂದ ನಾನು ಗ್ರಾಮೀಣಾಭಿವೃದ್ಧಿ ಮಂತ್ರಿ ಆಗಿ ಕೆಲಸ ಮಾಡುತ್ತಿದ್ದೇನೆ. ಒಂದುವರೆ ವರ್ಷದಿಂದಲೂ ಮುಖ್ಯಮಂತ್ರಿಗಳೆ ನನ್ನ ಗಮನಕ್ಕೆ ತರದೆ, ಇಲಾಖೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಬಿಜೆಪಿಯ ಹಿರಿಯ ಸಚಿವನಾಗಿ ಇದು ನನಗೆ ನೋವಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 1200 ಕೋಟಿಗೆ ಸಂಬಂಧಿಸಿದಂತೆ ಕಾನೂನು ಮೀರಿ ಸುಖಾಸುಮ್ಮನೆ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರು ದಾಖಲಿಸಿದ್ದಾರೆ.
ಇನ್ನು ಸಿಎಂ ವಿರುದ್ಧ ಕ್ಯಾಬಿನೆಟ್ ಸಚಿವರೊಬ್ಬರೇ ಹೈಕಮಾಂಡ್ ಗೆ ದೂರು ನೀಡಿದ್ದು, ಸರ್ಕಾರಕ್ಕೆ ಇರುಸು ಮುರುಸು ಉಂಟುಮಾಡೋದ್ರಲ್ಲಿ ಸಂಶಯವಿಲ್ಲ.
ಇದಲ್ಲದೆ ತಮ್ಮ ಇಲಾಖೆಯಲ್ಲಿ ಮಿತಿ ಮೀರಿದ ಹಸ್ತಕ್ಷೇಪ ಆಗುತ್ತಿದೆ ಎಂದು ಆರೋಪಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧವೇ ವಾರ್ ಡಿಕ್ಲೇರ್ ಮಾಡಿದ್ದಾರೆ.
ಈಶ್ವರಪ್ಪ ಗಮನಕ್ಕೆ ತಾರದೇ ಆರ್ ಡಿಪಿಆರ್ ಇಲಾಖೆಯ ಅನುದಾನವನ್ನು ನೇರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಂಚಿದ್ದಾರೆ ಎನ್ನಲಾಗಿದೆ.
ಇದೇ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಕೆ.ಎಸ್ ಈಶ್ವರಪ್ಪ, ಇಂದು ರಾಜ್ಯಪಾಲ ವಜುಭಾಯಿವಾಲಾ ಭೇಟಿ ಮಾಡಿ ಲಿಖಿತ ದೂರು ನೀಡಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರ ಬೇಕಾದ್ರೆ ಆಡಳಿತ ವೈಖರಿ ಸಂಪೂರ್ಣ ಬದಲಾವಣೆ ಮಾಡಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.
