K. S. Eshwarappa | ನಾನು ಯಾವ ತಪ್ಪು ಮಾಡಿಲ್ಲ
ಮೈಸೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನನಗೆ ಮೊದಲ ದಿನವೇ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಬರುತ್ತೇನೆಂದು ಗೊತ್ತಿತ್ತು ಎಂದು ಹೇಳಿದ್ದಾರೆ.
ಪ್ರಕರಣದ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ಈ ಪ್ರಕರಣದಲ್ಲಿ ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಕೊಟ್ಟಿದೆ. ತನಿಖೆ ಮೂಲಕ ಈಗ ಸಂಪೂರ್ಣ ಆರೋಪ ಮುಕ್ತನಾಗಿದ್ದೇನೆ. ಪ್ರಕರಣದಿಂದ ಪಕ್ಷಕ್ಕೆ ಇದ್ದ ಮುಜುಗರ ಈಗ ನಿವಾರಣೆಯಾಗಿದೆ ಎಂದು ತಿಳಿಸಿದರು.

ಇನ್ನು ಬಿ ರಿಪೋರ್ಟ್ ಆದರೂ ಕಾಂಗ್ರೆಸ್ ಈ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿರುವುದು ಬೇಸರ ತರಿಸಿದೆ. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಪ್ರಕರಣದ ತನಿಖೆಗಳು ಹೇಗೆ ನಡೆಯುತ್ತದೆ ಎಂದು ಗೊತ್ತಿದ್ದರೂ ಬಿ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವುದು ಬೇಸರ ಮೂಡಿಸಿದೆ. ಸಿದ್ದರಾಮಯ್ಯ ಕಾನೂನು ಪಂಡಿತ ಆಗಿದ್ದಾರೆ. ಸುಮ್ಮನೆ ಪ್ರಕರಣದ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮತ್ತೆ ಸಂಪುಟ ಸೇರುವ ಬಗ್ಗೆ ಮಾತನಾಡಿದ ಈಶ್ವರಪ್ಪ, ನಾನು ಸಚಿವ ಸಂಪುಟ ಮತ್ತೆ ಸೇರುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ಯಾವ ತಪ್ಪು ಇರದಿದ್ದರೂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದೆ. ಈಗ ಆರೋಪ ಮುಕ್ತ ನಾಗಿದ್ದೇನೆ. ಸಂಪುಟದ ಭಾಗವಾಗುವ ಎಲ್ಲ ನಿರ್ಧಾರಗಳು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.








