ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ – ಸಿ ಎಂ ಘೋಷಣೆ..
ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಎಂದು ಗುರುತಿಸಿಕೊಂಡಿದ್ದ ಕಲ್ಯಾಣ ಕರ್ನಾಟಕಕ್ಕೆ ಹೈದ್ರಾಬಾದ್ ನಿಜಾಮರಿಂದ ಸ್ವಾತಂತ್ರ್ಯ ದೊರೆತು ಇಂದು ಅಮೃತಮಹೋತ್ಸವ. ಈಗಾಗಿ ರಾಜ್ಯ ಸರ್ಕಾರ ಇಂದು ಕಲ್ಯಾಣ ಕರ್ನಾಟಕ ಅಮೃತಮಹೋತ್ಸವವನ್ನ ಆಚರಿಸಿಕೊಳ್ಳುತ್ತಿದೆ.
ಕಲ್ಬುರ್ಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಮಂಡಳಿಗೆ ಹಣ ಘೋಷಣೆ ಮಾಡಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಘೋಷಿತ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಮುಂಬರುವ ವರ್ಷವೂ 3 ಸಾವಿರ ಕೋಟಿ ರು. ಹಂಚಿಕೆ ಮಾಡಲಾಗುವುದು. ಕಲಬುರಗಿಯಲ್ಲಿ ಜವಳಿ ಪಾರ್ಕ್ಗೆ ಶೀಘ್ರ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯು ಬಳ್ಳಾರಿಯಿಂದ ಕಲಬುರಗಿವರೆಗೆ ಅಭಿವೃದ್ಧಿ ಆಗಿಲ್ಲ. ಇದನ್ನು ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡು ನಾಲ್ಕು ಪಥದ ರಸ್ತೆಯನ್ನು ನಿರ್ಮಿಸಲಾಗುವುದು. ಇದರಿಂದ ಕಲಬುರಗಿಯಿಂದ ಬಳ್ಳಾರಿ ಮೂಲಕ ಬೆಂಗಳೂರಿಗೆ ತೆರಳುವವರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 2100 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಹೊಸದಾಗಿ 68 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ 8 ಕೋಟಿ ರು. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.