ಕನ್ನಡದ ಹಿರಿಯನಟ ರಾಜೇಶ ನಿಧನ Saaksha Tv
ಬೆಂಗಳೂರು: ಹಿರಿಯನಟ ಕಲಾತಪಸ್ವಿ ರಾಜೇಶ್ ಅವರು ನಿಧನ ಹೊಂದಿದ್ದಾರೆ.
87 ವರ್ಷದ ರಾಜೇಶ ಅವರು ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಖಾಸಗಿ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಲಾತಪಸ್ವಿ ಇಹಲೋಕ ತ್ಯಜಿಸಿದ್ದಾರೆ.
ರಾಜೇಶ ಅವರು 1932 ಎಪ್ರಿಲ್ 15 ರಂದು ಜನಿಸಿದರು. ಇವರ ಮೂಲ ಹೆಸರು ಮುನಿ ಚೌಡಪ್ಪ. ಇವರು 60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಇವರು ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದರು. ರಂಗಕರ್ಮಿ ರಾಜೇಶ ಅವರು ಶಕ್ತಿ ನಾಟಕ ಮಂಡಳಿ ಕಟ್ಟಿದ್ದರು.
ರಾಜೇಶ ಅವರು ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದರು. 1968ರಲ್ಲಿ ನಮ್ಮ ಊರು ಚಿತ್ರದಲ್ಲಿ ರಾಜೇಶ್ ಅಂತ ಹೆಸರು ಬದಲಿಸಿಕೊಂಡರು. ಶ್ರೀನಿ ನಟನೆಯ ಓಲ್ಡ್ ಮಾಂಕ್ ಇವರ ಕಟ್ಟ ಕಡೆಯ ಚಲನಚಿತ್ರ.
ಮಗಳು ನಿವೇದಿತಾ ಕೂಡಾ ನಟಿಯಾಗಿದ್ದು, ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದಾರೆ. ಇವರು ತಮಿಳು, ಕನ್ನಡ ಚಿತ್ರದಲ್ಲಿ ನಟಿಸಿದ ನಟ ಅರ್ಜುನ್ ಸರ್ಜಾ ಜೊತೆ ಮದುವೆಯಾಗಿದ್ದಾರೆ. ಇವರ ಅಳಿಯ, ಮಗಳು, ಮೊಮ್ಮಗಳು ಸೇರಿದಂತೆ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.








