ನಾನು ಪತ್ರಕರ್ತನಾಗಲು ಪ್ರೇರೇಪಿಸಿದ ಮಹಾಗುರು ಇನ್ನಿಲ್ಲ. ಈ ದುಃಖ ಶಾಶ್ವತ: ರವಿ ಬೆಳಗೆರೆ ಎನ್ನುವ ಸಮೃದ್ಧ ಬಿದಿರು ಕಟ್ಟೆ ಬಂದು ಉರುಳಿಹೋಯಿತೆನ್ನುವ ದುಃಖ: Marchala manthana ravi belagere
“ಹಣ ಮಾಡ್ತೀನಿ ಅಂತ ಹೋಗು ಕೇವಲ ಹಣ ಮಾತ್ರ ಗಳಿಸ್ತೀಯಾ! ಕೀರ್ತಿ ಗಳಿಸಿಕೊಳ್ಳಬೇಕು ಅಂತ ದುಡಿ ಕೀರ್ತಿ ಮಾತ್ರ ಬರತ್ತೆ. ಆದ್ರೆ ಕೆಲಸ ಮಾಡ್ತೀನಿ ಅಂತ ಹೊರಡು ಹಣ ಮತ್ತು ಕೀರ್ತಿ ಎರಡೂ ಹುಡುಕಿಕೊಂಡು ಬರ್ತಾವೆ..” ಹೀಗಂತ ಬದುಕಿನ ಕುರಿತಾಗಿ ನೂರಾರು ಪ್ರಾಕ್ಟಿಕಲ್ ಮಾತುಗಳನ್ನು ಆಡುತ್ತಿದ್ದ ಗುರು ರವಿ ಬೆಳಗೆರೆ. Marchala manthana ravi belagere

ಅವರೊಂದಿಗಿನ ನನ್ನ ಸಣ್ಣ ಒಡನಾಟಕ್ಕೂ ಎಂಟು ವರ್ಷ ತುಂಬಿತ್ತೇನೋ! ಅದರೆ ಆ ಗುರು ನನ್ನ ಮೊಬೈಲ್ ನಲ್ಲಿ ಒಂದು ಮಿಸ್ ಕಾಲ್ ಉಳಿಸಿ ಮತ್ತೆ ಕಾಲ್ ಮಾಡಿದರೇ ರಿಸೀವ್ ಮಾಡಲು ಸಾಧ್ಯವಾಗದಷ್ಟು ದೂರದ ನಾಟ್ ರೀಚಬಲ್ ಪ್ರದೇಶಕ್ಕೆ ಎದ್ದು ನಡೆದಿದ್ದಾರೆ. ಗುಂಡು ಬಿಟ್ಟಿದ್ದರು, ಸಮೃದ್ಧ ಸಿಗರೇಟು ಸುಡುತ್ತಿದ್ದರು ಆದರೆ ಈಗ ದೇಹವನ್ನೇ ಬಿಟ್ಟು ಅನಂತ ವಿಶ್ವದ ಚಿದ್ವಿಲಾಸದಲ್ಲಿ ತಮ್ಮದೊಂದು ಚಿನ್ಮಯಾತ್ಮವನ್ನು ಬೆರೆಸಿ ಪಂಚಭೂತಗಳಲ್ಲಿ ಲೀನವಾಗಿ ಕೆಲವು ಗಂಟೆಗಳು ಕಳೆದು ಹೋಗಿವೆ. ನನ್ನನ್ನು ಪ್ರಭಾವಿಸಿದ ಕನ್ನಡ ಪತ್ರಿಕೋದ್ಯಮದ ಆ ಆಲದ ಮರಕ್ಕೊಂದು ನನ್ನ ಸಣ್ಣ ಅಶ್ರುಪೂರಿತ ನುಡಿನಮನವಿದು.
“ದಾವಣಗೆರೆನಾ! ಹರಪನಹಳ್ಳಿಯಲ್ಲಿ ನಾನ್ ಸತ್ತೇ ಹೋಗ್ಬೇಕಿತ್ತು. ಉಳ್ಕೊಂಡೆ! ಗನ್ ಇತ್ತು ಕೈನಲ್ಲಿ ಪ್ರಾಣ ಉಳಿಸ್ತು. ನಮ್ ರೇವಣಸಿದ್ದಯ್ಯನವರದ್ದು ದಾವಣಗೆರೆ. ಬರ್ತೀನಯ್ಯಾ! ನಿನ್ನಮ್ಮನಿಗೆ ಒಳ್ಳೆ ತಂಬುಳಿ ನೀರು ಗೊಜ್ಜು ಮಾಡೋಕೆ ಹೇಳು. ಬ್ರಾಮಣರಿಗೆ ನಾಟಿಕೋಳಿ ಮುದ್ದೆ ಮಾಡು ಅಂತಂತೂ ಹೇಳಕ್ಕಾಗಲ್ಲ; ಬರ್ತೀನಿ. ನಿನ್ಮಪ್ಪನಿಗೆ ವಾಕ್ ಮಾಡೋಕೆ ಹೇಳು; ನೇರಳೇ ಹಣ್ಣಿನ ಜ್ಯೂಸ್ ಕುಡಿಸು ಶುಗರ್ ಕಂಟ್ರೋಲ್ ಆಗತ್ತೆ. ನೆಕ್ಸ್ಟ್ ಸೀಸನ್ ನಾನೇ ಜ್ಯೂಸ್ ಮಾಡ್ಕೋತಿನಿ ನಂಗೂ ಬೇಕಲ್ಲ. ಪಲ್ಪ್ ಸಹಿತ ಜ್ಯೂಸ್. ನಿಮ್ಮಪ್ಪನ ಹೆಸರಲ್ಲಿ ಒಂದು ಬಾಟಲ್ ಮಾಡಿಟ್ಟಿರ್ತೀನಿ ಬಿಡು..” ಹೀಗಂತ ರವಿ ಬೆಳಗೆರೆ ಬಾಸ್ ಹೇಳಿ ಮೂರ್ನಾಲ್ಕು ತಿಂಗಳಾಗಿತ್ತು. ದಾವಣಗೆರೆ ಮನೆಗೂ ಬರಲಿಲ್ಲ. ಅಪ್ಪನಿಗೆ ಶುಗರ್ ಕಂಟ್ರೋಲ್ ಮಾಡುವ ನೇರಳೇ ಹಣ್ಣಿನ ಜ್ಯೂಸ್ ಕೂಡಾ ಮಾಡಿಕೊಡಲಿಲ್ಲ ಬೆಳಗರೆ ಬಾಸ್. ಯಾಕ್ ಹೀಗೆ ಮಾತು ತಪ್ಪಿದ್ರಿ..?
ಇದು ಬೆಳಗೆರೆಯದ್ದಲ್ಲ ಕನ್ನಡ ಪತ್ರಿಕೋದ್ಯಮದ ಒಂದು ಸುದೀರ್ಘ ಸುವರ್ಣ ಅಧ್ಯಾಯದ ಯುಗಾಂತ್ಯ:

ಮೂರುಮುಕ್ಕಾಲು ಅಕ್ಷರ ಬರೆದು; ಯಾವ ತಲೆ ಕೆಟ್ಟವನೂ ಓದಲಾರದಷ್ಟು ಅದ್ವಾನದ ಎರಡೋ ಮೂರೋ ಪುಸ್ತಕ ಬರೆದು ನಾನೇ ಮಹಾ ಘನ ಸಾಹಿತಿ ಅಂತ ಅಹಂಕಾರದಲ್ಲಿ ಮೆರೆಯುವ ಮಹಾನುಭಾವರನ್ನು ನೋಡಿದ್ದೇನೆ. 85 ಪುಸ್ತಕ ಬರೆದ, ಕನ್ನಡ ಪತ್ರಿಕೋದ್ಯಮದ ಆಲದಮರ, ಕನ್ನಡದ ಬೆಸ್ಟ್ ಸೆಲ್ಲರ್ ಸಾಹಿತಿ ಬರಹಗಾರ ಕಾದಂಬರಿಕಾರ ಅಂಕಣಕಾರ ಕಮ್ ಪುಸ್ತಕೋದ್ಯಮಿಯಾಗಿ ದಶಕಗಳ ಕಾಲ ಬಿಗಿಯಾಗಿ ಕೂತವರು ಬೆಳೆಗೆರೆ ಬಾಸ್. ಅವರಲ್ಲಿ ಅಹಂಕಾರ ಇಣುಕಿದ್ದು ಯಾವತ್ತೂ ಕಾಣಲಿಲ್ಲ.
ಓದಿದರು.. ಬರೆದರು.. ಓದಿಸಿದರು.. ‘ಅಕ್ಷರ ಮಾಂತ್ರಿಕ’ನ ಪಟ್ಟ ಪಡೆದು ಓದುಗರ ಚಿತ್ತ ಸಿಂಹಾಸನದಲ್ಲಿ ವಿರಾಜಮಾನರಾದರು. ಅಸಂಖ್ಯ ಅಭಿಮಾನಿಗಳ ಹೃದಯ ಸಾಮ್ರಾಟರಾದರು. ಓದುಗರನ್ನು ದೊರೆ ಎಂದರು. ಸೆಲೆಬ್ರಿಟಿ ಪತ್ರಕರ್ತರಾದರು. ನನ್ ಮೂಗಿಗೆ ಕೈ ಹಾಕಬೇಡ ಅಷ್ಟೆ ಅಂತ ವಿರೋಧಿಗಳಿಗೆ ಎಚ್ಚರಿಕೆ ಮುಟ್ಟಿಸಿದರು.
ಅವರು ಕೈ ಇಟ್ಟಿದ್ದೆಲ್ಲಾ ಬಂಗಾರವೇ. ಅವರಲ್ಲೊಂದು ವಿಷನ್ ಇತ್ತು. ಸಾಧಿಸಿಯೇ ಸಾಯಬೇಕೆನ್ನುವ ಹಠ ಇತ್ತು. ಬರೆಯಲು ಓದಲು ಕುಳಿತರೇ ತಪಸ್ಸಿಗೆ ಕುಳಿತವರ ತರಹದ ಶ್ರದ್ಧೆ ಏಕಾಗ್ರತೆ ಇತ್ತು. ಬೆಳಗೆರೆ ಒಂದು ಸಲ ಪೆನ್ನನ್ನು ಪುಟದ ಮೇಲಿಟ್ಟರೇ ಒಂದೇ ಒಂದು ಕಾಟು ಹೊಡೆಯದೇ ಬರೆದು ಮುಗಿಸುತ್ತಿದ್ದರು. ಅವರ ಪೆನ್ನು ಶತಾಬ್ದಿ ಎಕ್ಸ್ ಪ್ರೆಸ್ ನಂತೆ ಸರಾಗವಾಗಿ ಸಾಗುತ್ತಿತ್ತು. ಪೆನ್ನಿನ ಕ್ಯಾಪ್ ತೆಗೆಯಿತ್ತಿದ್ದಂತೆ ತಲೆಯಲ್ಲಿ ವಾಕ್ಯ ರಚನೆ ಸುಲಿಲಿತವಾಗಿ ಸೃಷ್ಟಿಯಾಗುತ್ತಿತ್ತು. ಕನ್ನಡ ಸಾಹಿತ್ಯವನ್ನು ಗಣಿತದ ತರಹ ಕ್ಯಾಲ್ಕುಲೇಟೀವ್ ಆಗಿ ಬರೆಯಬಲ್ಲ ಏಕೈಕ ಬರಹಗಾರ ಬೆಳಗೆರೆ ಮಾತ್ರ. ಹಾಗಾಗೇ ಅವರು ಅಕ್ಷರ ಬ್ರಹ್ಮ ಆದರು. ಓದುಗರನ್ನು ಕಲ್ಪನಾ ವಿಲಾಸದಲ್ಲಿ ತೇಲಿಸಿದರು. 100 ಪುಟ ಓದಿದರು 10 ಪುಟ ಬರೆದರು.
ನೂರಾರು ಘಜಲ್ ಗಳು ಅವರ ಬಾಯಲ್ಲಿದ್ದವು. ಕಿಶೋರ್ ಕುಮಾರ್ ರನ್ನು ಆರಾದಿಸಿದ್ದರು. ರೇಖಾ ಬಗ್ಗೆ ಅವರಿಗೆ ಅದೇನೋ ಆಂತರ್ಯದಲ್ಲಿ ವಿಶೇಷವಾದ ಪ್ರೀತಿ ಇತ್ತು. ಅಮಿತಾಬ್ ಕುರಿತಾಗಿ ಸಣ್ಣ ಮತ್ಸರವೂ ಇತ್ತು. ಅಮೃತಾ ಪ್ರೀತಂ ಅಂದರೆ ಕ್ರಶ್. ಮನ್ನಾಡೆ ಸಂಗೀತ ಆಸ್ವಾದಿಸುತ್ತಿದ್ದರು. ನಮ್ಮ ಹುಬ್ಬಳ್ಳಿಯ ಭೀಮ್ ಸೇನ್ ಜೋಶಿ ಏನ್ ಕಮ್ಮೀನಾ ಅಂತ ಮೀಸೆ ತೀಡಿಕೊಳ್ಳುತ್ತಿದ್ದರು. ತಿಳಿಸಾರಿನಷ್ಟೇ ಮೋಹ ಮೀನು ಸಾರಿನ ಮೇಲೂ ಇತ್ತು. ಅವರ ನೆನಪಿನ ಶಕ್ತಿ ಅಗಾದ. ಪ್ರತೀ ಸಲ ಹೋದಾಗಲೂ ಕಳೆದ ಸಲ ಹಾಕಿಕೊಂಡು ಬಂದ ಬಟ್ಟೆ ಚಪ್ಪಲಿಯಿಂದ ಹೇರ್ ಸ್ಟೈಲ್ ತನಕ ನೆನಪಿಟ್ಟುಕೊಂಡು ಮತಾಡುತ್ತಿದ್ದರು. ಅದೊಂದು ಬ್ರಹ್ಮಾಂಡ ಜ್ಞಾನ ಬ್ರಹ್ಮಾಂಡ ನೆನಪಿನ ಭಂಡಾರ. ಬೆಳಗೆರೆ ಅಂದರೆ ನೇರ, ಸ್ಪಷ್ಟ ಮತ್ತು ನಿರ್ಭೀಡೆ. ಅವರು ಸ್ವಚ್ಛಂದ ಮೃಗ; ಬಂಧನಗಳಿರಲಿಲ್ಲ ಮತ್ತು ಯಾವ ಕಟ್ಟುಪಾಡುಗಳೂ ಇರಲಿಲ್ಲ.

ಬ್ರಾಹ್ಮಣ ಅಂತಾದರೆ ಗುಣದಲ್ಲಾಗು ಜಾತಿಯಲ್ಲಾಗಬೇಡ ಅಂತ ನಂಗೆ ಅನೇಕ ಸಲ ಬಯ್ದಿದ್ದರು. ನಿನ್ನ ಸರ್ ನೇಮ್ ಭಾರದ್ವಾಜ್ ಅಂತ ಯಾಕೆ ಇಟ್ಕೊಂಡಿದ್ದೀಯಾ ನಿಂಗೂ ಜಾತಿ ಮೋಹನಾ? ನೀನ್ ತ್ಯಾಗರ್ತಿಯವನು ತಾನೆ! ಹುಟ್ಟಿದ ಊರಿನ ಮೋಹ ಇಟ್ಕೋ. ‘ವಿಶ್ವಾಸ್ ತ್ಯಾಗರ್ತಿ’ ಅಂತ ಬದಲಾಯಿಸ್ಕೊ ಅಂತ ಅವರು ಪ್ರತೀ ಸಲ ಸಿಕ್ಕಾಗಲೂ ಹೇಳುತ್ತಿದ್ದರು.
ದೇವೇಗೌಡ್ರು ನನ್ ಮೇಲೆ ಕೇಸ್ ಹಾಕಿಬಿಟ್ರು ಇಲ್ಲದೇ ಹೋಗಿದ್ರೆ ಗಾಡ್ ಫಾದರ್ ಪುಸ್ತಕದ ಚೆನ್ನಮಾದಿರೆಡ್ಡಿಯಾಗಿ ದೇವೇಗೌಡ್ರನ್ನ ಪಾತ್ರದಲ್ಲಿ ನಿಲ್ಲಿಸ್ತಿದ್ದೆ ಅಂತ ಬೇಸರ ತೋಡಿಕೊಳ್ತಿದ್ದರು. ಯಾಕೋ ಬರೆಯೋಕೆ ಆಗ್ತಿಲ್ಲ ಕಣಯ್ಯ! ಸತ್ತು ಹೋದ್ರೆ ಚೆಂದ. ಬರೆಯದ ಬೆಳಗೆರೆ ಬದುಕಿಯೂ ಸತ್ತಂತೆ ಅಂತ ಬಡಬಡಿಸ್ತಾ ಇದ್ದರು.
ರವಿ ಬೆಳಗೆರೆ ಅನ್ನೊ ಮಹಾಗುರುವನ್ನು ನೆನಪು ಮಾಡಿಕೊಳ್ಳೋಕೆ ಇಂತ ಸಾವಿರ ಸಾವಿರ ಮಾತುಗಳು ಕಿವಿಯಲ್ಲಿ, ಮನಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿವೆ. ಈ ದೀಪಾವಳಿಯಷ್ಟೆ ಅಲ್ಲ ಇನ್ನು ಮುಂದೆ ಬರುವ ಎಲ್ಲಾ ದೀಪಾವಳಿಯೂ ನಂಗೆ ಸೂತಕವೇ!
“ಬಾಸ್ ಸಿದ್ದಾರೂಡಾ ಮಠಕ್ಕೆ ಹೋಗಿದ್ದೆ; ಬೈಕಲ್ಲಿ 1700 ಕಿಲೋ ಮೀಟರ್ 4 ದಿನದಲ್ಲಿ ಮುಗಿಸಿ ಬಂದೆ ಎಂದೆ..”
“ಅಯ್ಯೋ ಪಾಪಿ ಮುಂಡೇದೆ ಆ ಹೈವೇನಲ್ಲಿ ರಿಸ್ಕ್ ಯಾಕ್ ತಗೊಂಡ್ಯೋ!” ಅಂತ ಬಯ್ದರು. ಆಮೇಲೆ ಪತ್ರಿಕೋದ್ಯಮದಲ್ಲಿ ನಂದೊಂದಷ್ಟು ಪಳಯುಳಿಕೆ ಉಳಿತಾವೆ ಅದ್ರಲ್ಲಿ ನೀನು ಒಬ್ಬ. ಬರಿಯಯ್ಯಾ ಏನಾದ್ರು ಅಂದರು. ಪರಮ ಸೋಮಾರಿಯಾದ ನಾನು ಹ್ಹಿ ಹ್ಹಿ ಹ್ಹಿ ಎಂದು ಹಲ್ಲು ಬಿಟ್ಟೆ..
ಒಂದ್ ಚಾನಲ್ ಮಾಡಕ್ಕೆ ಎಷ್ಟಾಗತ್ತಯ್ಯ ಖರ್ಚು. ಲೆಕ್ಕಾ ಹಾಕ್ಕೊಂಡು ಬಾ. ನಾ ಗಣಿತದಲ್ಲಿ ವೀಕು ಆದ್ರೆ ನನ್ ಎಕನಾಮಿಕ್ಸ್ ಪಕ್ಕಾ! ಎಲ್ಲೆಲ್ಲೋ ಅಲಿಬೇಡ ಒಂದು ಅದ್ಭುತವಾದ ಚಾನೆಲ್ ಮಾಡಣ. ಸುದ್ದಿನೂ ಬರಬೇಕು ಸಂಗೀತಾನು ಕೇಳಬೇಕು ಹಂಗಿದ್ದ ಒಂದು ಚಾನೆಲ್ ಮಾಡಣ ಅಂದಿದ್ದರು ಬಾಸ್. ಅದು ನನ್ನ ಮತ್ತು ಅವರ ಕೊನೆಯ ಸಂಭಾಷಣೆ. ಆಸ್ಪತ್ರೆ ಸೇರಿದ್ದರು ಅಲ್ಲಿಂದಲೇ ಮಾತಾಡಿದ್ದರು. ಈ ಚಾನೆಲ್ ಪ್ರಸ್ತಾಪ ಈ ಹಿಂದೆಯೂ ಸುಮಾರ ಸಲ ನಡೆದಿತ್ತು. ನಾನದನ್ನು ಸೀರಿಯಸ್ ಆಗಿ ತಗೊಂಡಿರಲಿಲ್ಲ..
ತಂಗಿ ಮದುವೆಗೆ ಚೀಫ್ ಗೆಸ್ಟ್ ಆಗಿ ಬರದೆ ಕೈ ಕೊಟ್ಟಿದ್ದಕ್ಕೆ ಅವರಿಗೆ ಬೇಸರ ಇತ್ತು. ಆ ಕೂಸನ್ನು ಕರ್ಕೊಂಡ್ ಬಾರಯ್ಯ ಆಶಿರ್ವಾದ ಮಾಡ್ತೀನಿ ಅಂದಿದ್ರು. ಅದೊಂದು ಕೆಲಸ ಮಾಡಿದೆ. ಕೊನೆಗೂ ಅದೊಂದು ಸಮಾಧಾನ ಉಳಿತು ಸ್ಮರಣೆಗೆ.
ಮೊನ್ನೆ ಒಂದು ವಾರದ ಹಿಂದೆ ಮಿಸ್ ಕಾಲ್ ಇತ್ತು. ಅದಕ್ಕೂ ಎರಡು ದಿನ ಹಿಂದೆ ಕಾಲ್ ಮಾಡಿದ್ದೆ! ಸರ್ ನಿಮ್ಮ ಊರಿಗೆ ಹೋಗಿದ್ದೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕಾಣಿಸಿಕೊಂಡ್ರು ಅಂದಿದ್ದೆ. ನಿಂಗೂ ಕಾಣಿಸಿದ್ರೇನಯ್ಯ ಭೇಷ್. ನಂಗೆ ಸತ್ಯಕಾಮರು ಆಗಾಗ ಕಾಣಿಸ್ಕೊಳ್ತಾರೆ ಅಂದ್ರು. ಬೈಕ್ ಓಡಿಸುವಾಗ ಕಾಲ್ ಮಾಡಿದ್ದರು ಅನ್ಸತ್ತೆ ನೋಡಿರಲಿಲ್ಲ. ಮತ್ತೆ ರಿಟರ್ನ್ ಕಾಲ್ ಮಾಡಿದೆ ರಿಸೀವ್ ಮಾಡಲಿಲ್ಲ. ಇನ್ನು ಯಾವತ್ತೂ ರಿಸೀವ್ ಮಾಡಲ್ಲ ಅವರು. ಬಾಸ್ ಶಾಶ್ವತವಾಗಿ ನಾಟ್ ರೀಚಬಲ್ ಆಗಿಬಿಟ್ಟರು.
ಹೇಗೆ ಮರೆಯಲಿ ನಿಮ್ಮನ್ನ ಬಾಸ್! ಹೇಳಿ ಹೋಗಲಿಲ್ಲ ಕಾರಣ:
ಬೆಳಗೆರೆ ಬಾಸ್ ಅಚೇತನ ಪಾರ್ಥಿವ ಶರೀರ ಮತ್ತು ಆ ಮುಖವನ್ನು ಗಮನಿಸಿ ನೋಡಿ. ಅಲ್ಲೊಂದು ಕಡು ವಿಷಾದದ ಪೊರೆ ಕಾಣುತ್ತಿದೆ. ಯಾವ ಸಂಕಟವಿತ್ತೋ ಹೃದಯದಲ್ಲಿ. ಅದ್ಯಾವ ಪಶ್ಚಾತ್ತಾಪವಿತ್ತೋ? ಯಾವ ನೋವಿನ ಭಾವ ಹುದುಗಿತ್ತೋ? ಯಾರಿಗೋ ಹೇಳಿಕೊಳ್ಳಲಾರದ ಅದ್ಯಾವ ಜೀರ್ಣವಾಗದ ಕೊರಗಿತ್ತೋ? ಜಗನ್ಮಾತೆಯೇ ಬಲ್ಲಳು. ಇಲ್ಲೆಲ್ಲೋ ನಿಂತು ನಮ್ಮ ಈ ಚರಮವಾಕ್ಯಗಳನ್ನು ಓದುತ್ತಿದ್ದಾರೇನೋ ಬೆಳಗೆರೆ ಸಾರ್..
“ತುಂಬಾ ಜನಕ್ಕೆ ಗೊತ್ತಿಲ್ಲ; ನಾವೆಲ್ಲಾ ರೇಡಿಯೋ ಕೇಳಿ ಬೆಳೆದವರು. ಡಾ. ವಿ.ಸಿ ಐರಸಂಗ ಹೆಸರನ್ನು ಮರೆಯೋಕ್ಕಾಗತ್ತೇನ್ರಿ. ಒಬ್ಬ ಆರ್ಡಿನರಿ ಅಂಚೇ ಇಲಾಖೆಯ ನೌಕರ ಎಷ್ಟು ಚೆಂದದ ಪದ್ಯಗಳನ್ನು ಬರೆದರು..” ಹೀಗಂತ ಡಾ. ವಿ.ಸಿ ಐರಸಂಗ ಬಗ್ಗೆ ರವಿ ಬೆಳಗೆರೆಯವರು ಎಂದೂ ಮರೆಯದ ಹಾಡಿನಲ್ಲಿ ಮಾತಾಡಿದ್ರು. ಅದೇನು ಕಾಕತಾಳಿಯವೋ ಬೆಳಗೆರೆ ಮತ್ತು ಐರಸಂಗ ಇಬ್ಬರೂ ಇಹವನ್ನು ತೊರೆದು ಪರದ ಕಡೆಗೆ ನಡೆದಿದ್ದು ಒಂದೇ ದಿನ. ಆ ಬೆಳಕಿನ ಲೋಕದ ದಾರಿಯಲ್ಲಿ ಆಕಾಶವಾಣಿ ಪದ್ಯಗಳ ಕುರಿತಾಗಿ ಐರಸಂಗ ಅವರನ್ನು ಬೆಳಗೆರೆ ಸಂದರ್ಶನ ಮಾಡ್ತಾರೇನೋ!

60 ತುಂಬಿದಾಗ ಷಷ್ಟಿ ಪೂರ್ತಿಗೆ ನಾನೊಂದು ವಾಹಿನಿಗೆ ಅವರ ಚುಟುಕು ಸಂದರ್ಶನ ಕಾರ್ಯಕ್ರಮ ಮಾಡಿದ್ದೆ. 70 ತುಂಬಿದಾಗ ನನ್ನದೇ ಚಾನೆಲ್ ಮಾಡಿರ್ತೀನಿ ಅದಕ್ಕೊಂದು ಅದ್ಭುತ ಸಂದರ್ಶನ ಕೊಡಬೇಕು ಬಾಸ್ ಅಂದಿದ್ದೆ; ಅವತ್ತು, ಸೆಪ್ಟೆಂಬರ್ 5 ಗುರುಗಳ ದಿನ. ಅಂದು ಅವರೊಂದಿಗಿದ್ದೆ ನಾನು. ಮಾಡೋಣ ಹೋಗಯ್ಯ! ನಿಂಗೆ ಇಲ್ಲಾ ಅಂತೀನಾ. 70 ಏನೂ 80 ಕ್ಕೂ ಬಾ ವೀಲ್ ಚೇರ್ ನಲ್ಲಿ ಕೂತಿದ್ದರೂ ಮಾತಾಡ್ತೀನಿ ಅಂದಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ವಚನ ಭ್ರಷ್ಟರಾದ್ರಿ ಬಾಸ್. ಮೋಸ ಮಾಡಿಬಿಟ್ರಿ. ಹಿಂಗ್ಯಾಕೆ ಅನ್ಯಾಯ ಮಾಡಿ ಹೋದ್ರಿ ಬಾಸ್? ನಾವೇನ್ ಪಾಪ ಮಾಡಿದ್ವಿ ಅಂತ ನಮ್ಮನ್ನು ಬಿಟ್ಟೋದ್ರಿ?
“ಜಾತಸ್ಯ ಮರಣಂ ಧ್ರುವಂ” ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡು ಬಂದವರು ನಾವು. ಇವತ್ತು ನೀವು, ನಾಳೆ ನಾವು.. ಸಾವೆನ್ನುವುದೇ ಶಾಶ್ವತ ಸತ್ಯ. ನನ್ನ ಜೀವನದಲ್ಲಿ ಎಂದಿಗೂ ಮರೆಯದ ಹಾಡಿನ ಹೆಸರು “ರವಿ ಬೆಳಗೆರೆ”.. ತುಂಬು ಕಂಬನಿಯಿಂದ ಮಂಜಾದ ಕಣ್ಣುಗಳಿಂದ ಕೊನೆಯ ಸಾಲು ಬರೆಯುತ್ತಿದ್ದೇನೆ ಅಂತಿಮ ನಮಸ್ಕಾರ ಓದುಗರ ದೊರೆಗೆ.
-ವಿಶ್ವಾಸ್ ಭಾರದ್ವಾಜ್ (ವಿಭಾ)
ಮಾರ್ಜಾಲ ಮಂಥನ ಕಾಲಂ
ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ
Marchala manthana ravi belagere
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








