ಕರ್ನಾಟಕ ಸರ್ಕಾರ ಕನ್ನಡದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸುವುದು ಕಡ್ಡಾಯ. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ತಯಾರಾಗುವ ಕೈಗಾರಿಕಾ ಹಾಗೂ ಇತರ ಉತ್ಪನ್ನಗಳ ಮೇಲೆ ಹೆಸರು ಮತ್ತು ಬಳಕೆಯ ನಿರ್ದೇಶನಗಳನ್ನು ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಸಹ ಮುದ್ರಿಸಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಈ ಆದೇಶವನ್ನು ಸ್ವಾಗತಿಸಿದ್ದಾರೆ. ನಮ್ಮ ಮೂರು ಪ್ರಮುಖ ಬೇಡಿಕೆಗಳ ಪೈಕಿ ಒಂದನ್ನು ಸರ್ಕಾರ ಈಡೇರಿಸಲು ಮುಂದಾಗಿದೆ. ಈ ಆದೇಶದ ಪ್ರಕಾರ, ಇನ್ನು ಮುಂದೆ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಹೆಸರು ಹಾಗೂ ವಿವರಗಳು ಇರಬೇಕು. ಮಹಾಸಂಘರ್ಷ ಯಾತ್ರೆಯ ಮೊದಲ ಬೇಡಿಕೆ ಈಡೇರಿದಂತಾಗಿದೆ. ಇದಕ್ಕಾಗಿ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು, ಎಂದು ಅವರು ಹೇಳಿದ್ದಾರೆ.
ಅವರು, ಈ ಆದೇಶ ಕೇವಲ ಕಾಗದದ ಸುತ್ತೋಲೆಯಾಗಿ ಉಳಿಯಬಾರದು. ಇದು ಬೇಗನೆ ಜಾರಿಗೆ ಬರಲು ಅಧಿಕಾರಿಗಳು ಗಮನಹರಿಸಬೇಕು. ಉತ್ಪನ್ನ ತಯಾರಕರಿಗೆ ಸರಿಯಾದ ಮಾಹಿತಿ ನೀಡಿ, ನಿಯಮ ಪಾಲನೆ ಮಾಡುವಂತೆ ಒತ್ತಾಯಿಸಬೇಕು. ಈ ನಿಯಮ ಉಲ್ಲಂಘಿಸಿದರೆ, ಅಂತಹ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಬಾರದು, ಎಂದು ಆಗ್ರಹಿಸಿದ್ದಾರೆ.








