ಮಗಳು ಜಾನಕಿ ಖ್ಯಾತಿಯ ಚಂದು ಭಾರ್ಗಿ – ಕಿರುತೆರೆ ನಟ ಮಂಡ್ಯ ರವಿ ನಿಧನ
ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಗುರುತಿಸಿಕೊಂಡಿದ್ದ ಕನ್ನಡ ಕಿರುತೆರೆಯ ಖ್ಯಾತ ನಟ ಮಂಡ್ಯ ರವಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ನಟ ರವಿ ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟನ ಸಾವಿನ ಬಗ್ಗೆ ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟೀ ಎನ್ ಸೀತಾರಾಮ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು “ಮಗಳು ಜಾನಕಿ ಯ ‘ಚಂದು ಭಾರ್ಗಿ’ ರವಿ ಅಸ್ತಂಗತ. ಇನ್ನೂ 42..ನಾಲ್ಕು ಜನ್ಮಕ್ಕಾಗುವಷ್ಟು ಪ್ರತಿಭೆ..ಅತ್ಯಂತ ಆಘಾತಕಾರಿ” ಎಂದು ಬರೆದಿದ್ದಾರೆ. ನಿರ್ದೇಶಕ ಸೀತರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರವಿ ಆರೋಗ್ಯ ಕೂಡ ವಿಚಾರಿಸಿದ್ದರು.
ಮಂಡ್ಯ ಮೂಲದ ನಟ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್. ಖ್ಯಾತ ನಿರ್ದೇಶಕ ಟಿಎನ್ ಸೀತರಾಮ್ ಅವರ ಅನೇಕ ಧಾರಾವಾಹಿಗಳಲ್ಲಿ ರವಿ ಅವರು ನಟಿಸಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ರವಿ ಧಾರಾವಾಹಿ ಜೊತೆಗೆ ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಟಿಎನ್ ಸೀತಾರಾಮ್ ಅವರ ಮಾಯಾಮೃಗ, ಮುಕ್ತ ಹಾಗೂ ಮಗಳು ಜಾನಕಿ ಧಾರವಾಹಿಗಳಲ್ಲಿ ನಟಿಸಿದ್ದ ರವಿ ಪ್ರಸಾದ್ ಚಿತ್ರಲೇಖ, ಮಿಂಚು, ವರಲಕ್ಷ್ಮೀ ಸ್ಟೋರ್ಸ್ ಮುಂತಾದ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ