ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು : ಹೆಚ್ ಡಿ ಕುಮಾರಸ್ವಾಮಿ HD Kumaraswamy saaksha tv
ಬೆಂಗಳೂರು : ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ ಬಗ್ಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಹೆಚ್ ಡಿ ಕುಮಾರಸ್ವಾಮಿ, ಎಂಇಎಸ್ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ.
ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯದ ವಿರುದ್ಧ ರಾಜ್ಯ ಸರಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು.
ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಹಾಗೂ ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.