ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಅವಮಾನವಾಗಿದೆ ಎಂದು ನಟ ದುನಿಯಾ ವಿಜಯ್ ಆರೋಪಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಆಯೋಜಕರು ಕನ್ನಡಿಗರಿಗೆ ಸರಿಯಾದ ಗೌರವ ನೀಡಿಲ್ಲ ಎಂದು ಅವರು ವೇದಿಕೆಯ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೈಮಾದಲ್ಲಿ ಕನ್ನಡಿಗರಿಗೆ ಮತ್ತೊಮ್ಮೆ ಅವಮಾನ
ದುಬೈನಲ್ಲಿ ನಡೆಯುತ್ತಿರುವ ಸೈಮಾ 2025 ಸಮಾರಂಭದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕನ್ನಡಕ್ಕೆ ಆದ್ಯತೆ ಸಿಕ್ಕಿಲ್ಲ ಎಂದು ವರದಿಯಾಗಿದೆ. ಸೆಪ್ಟೆಂಬರ್ 5ರಂದು ತೆಲುಗು ಮತ್ತು ಕನ್ನಡ ಚಿತ್ರರಂಗದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಆದರೆ, ಮೊದಲು ತೆಲುಗು ಚಿತ್ರಗಳ ಪ್ರಶಸ್ತಿಗಳನ್ನು ವಿತರಿಸಲಾಯಿತು. ಅದು ಮುಗಿಯುವ ಹೊತ್ತಿಗೆ ಬಹಳ ತಡವಾಗಿದ್ದರಿಂದ, ಬಹುತೇಕ ಜನರು ಮತ್ತು ತೆಲುಗು ಕಲಾವಿದರು ಕಾರ್ಯಕ್ರಮದಿಂದ ಹೊರಟುಹೋದರು.
ದುನಿಯಾ ವಿಜಯ್ ಕಿಡಿ
ಜನರು ಖಾಲಿಯಾದ ನಂತರವೇ ಕನ್ನಡ ಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಟ ದುನಿಯಾ ವಿಜಯ್, ತಮ್ಮ ‘ಭೀಮ’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ (ಕ್ರಿಟಿಕ್ಸ್) ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದಾಗ, “ಯಾರೂ ಇಲ್ಲದಿದ್ದಾಗ ಸ್ಟೇಜ್‌ಗೆ ಕರೆದು ಕನ್ನಡಿಗರಿಗೆ ಅವಾರ್ಡ್ ಕೊಡೋದು ಎಷ್ಟು ಸರಿ? ಕನ್ನಡ ಭಾಷೆ ಮೇಲಿದೆ, ಅದನ್ನು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮಕ್ಕೆ ಈ ರೀತಿ ಮಾಡಬೇಡಿ. ಹೀಗಾದರೆ ಇನ್ನು ಮುಂದೆ ನಾವು ಯಾರೂ ಸೈಮಾ ಕಾರ್ಯಕ್ರಮಕ್ಕೆ ಬರುವುದಿಲ್ಲ” ಎಂದು ವೇದಿಕೆಯ ಮೇಲೆಯೇ ಆಯೋಜಕರನ್ನು ಪ್ರಶ್ನಿಸಿದರು.
ದರ್ಶನ್ ಅವರ ಹಳೆಯ ಆರೋಪ
ಇದೇ ರೀತಿಯ ಅವಮಾನಗಳು ಈ ಹಿಂದೆಯೂ ನಡೆದಿವೆ. ಈ ಹಿಂದೆ ನಟ ದರ್ಶನ್ ಕೂಡ ಕನ್ನಡಿಗರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು. ಕನ್ನಡದ ನಟರನ್ನು ಹಿಂದಿನ ಸಾಲಿನಲ್ಲಿ ಕೂರಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಆ ಕಾರಣದಿಂದ ಸೈಮಾ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಬೆಂಗಳೂರಿನಲ್ಲಿ ನಡೆದ ಸೈಮಾ ಕಾರ್ಯಕ್ರಮದಲ್ಲಿ ಮಾತ್ರ ಅವರು ಭಾಗವಹಿಸಿದ್ದರು. ಆದರೆ ಈ ಬಾರಿ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದ್ದು, ಸ್ಯಾಂಡಲ್‌ವುಡ್ ಕಲಾವಿದರು ಒಟ್ಟಾಗಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.








