ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಮೂಲಕ ಕನ್ನಡಿಗ ದೇವದತ್ ಪಡಿಕ್ಕಲ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಅಲ್ಲದೇ, ಈ ಪಂದ್ಯದಿಂದ ರಜತ್ ಪಾಟಿದಾರ್ ಅವರನ್ನು ಆಡುವ ತಂಡದಿಂದ ಕೈ ಬಿಡಲಾಗಿದೆ. ರಾಂಚಿ ಟೆಸ್ಟ್ ಸಂದರ್ಭದಲ್ಲಿ ವಿಶ್ರಾಂತಿ ಪಡೆದಿದ್ದ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದು, ಆಕಾಶ್ ದೀಪ್ ಹೊರಗೆ ನಡೆದಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ಬಳಗದಲ್ಲೂ ಬದಲಾವಣೆಯಾಗಿದೆ. ಒಲೀ ರಾಬಿನ್ಸನ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ವೇಗದ ಬೌಲರ್ ಮಾರ್ಕ್ ವುಡ್ ತಂಡ ಸೇರಿಕೊಂಡಿದ್ದಾರೆ.
ಇಂದು ಭಾರತದ 11ರ ಬಳಗದಲ್ಲಿ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ತಂಡದ ಭಾಗವಾಗಿದ್ದಾರೆ. ಈಗಾಗಲೇ ಭಾರತ ತಂಡವು ಈ ಸರಣಿ ವಶಕ್ಕೆ ಪಡೆದಿದ್ದು, ಈ ಪಂದ್ಯ ಔಪಚಾರಿಕವಾಗಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಭಾರತ ತಂಡವು 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ.