ಮಾರಣಾಂತಿಕ ಕೊರೋನಾ ಸೋಂಕಿಗೆ ಯುರೋಪ್ ತತ್ತರಿಸಿದ್ದು, ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದೆ. ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸರ್ಕಾರ ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳನ್ನು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಆದೇಶಿಸಿದೆ. ಈ ನಡುವೆ ರೋಮ್ ವಿಮಾನ ನಿಲ್ದಾಣದಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿರುವ ಬಗ್ಗೆ ವರದಿಗಳು ತಿಳಿಸಿವೆ. ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಕರ್ನಾಟಕದ ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ವಾರದ ಹಿಂದೆಯೇ ಟಿಕೆಟ್ ಬುಕ್ ಮಾಡಿದ್ದು, ಬುಧವಾರ ಸಂಜೆಯಿಂದಲೇ ಭಾರತದಿಂದ ವಿಮಾನ ಬರುವುದನ್ನು ಎದುರು ನೋಡುತ್ತಿದ್ದಾರೆ. ಆದರೆ ವಿಮಾನ ಯಾವ ಸಮಯದಲ್ಲಿ ಆಗಮಿಸುತ್ತದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.
ವಾರದ ಹಿಂದೆ ಟಿಕೆಟ್ ಬುಕ್ ಮಾಡುವಾಗ ಏರ್ ಇಂಡಿಯಾ ವೆಬ್ಸೈಟ್ನಲ್ಲಿ ಯಾವುದೇ ದಾಖಲೆ ಕಡ್ಡಾಯ, ನೀವು ಕೊಡಲೇಬೇಕು ಎಂದು ಹೇಳಿರಲಿಲ್ಲ, ಆದರೆ ಈಗ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ನೀಡಿದ ಮೇಲೆ ಪರಿಶೀಲಿಸಿ ನಿಮ್ಮ ಪ್ರಯಾಣವನ್ನು ರೀಶೆಡ್ಯೂಲ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಮಾಹಿತಿ ನೀಡಲೂ ಸಹ ಇಲ್ಲಿ ಯಾರೂ ಇಲ್ಲ.
ಇಟಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಜನ ಹೊರಗಡೆ ಬರುವುದಕ್ಕೆ ಭಯಪಡುತ್ತಿದ್ದಾರೆ. ಇಟಲಿ ಸರಕಾರ ದಿನಕ್ಕೊಂದು ಕಠಿಣ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಏರ್ಪೋರ್ಟ್ನಲ್ಲಿ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದ್ದು, ಹೊರಗಡೆ ಹೋಗಬಾರದು ಎನ್ನುವ ಈ ಸಮಯದಲ್ಲಿ ಏನೂ ಮಾಹಿತಿ ಕೊಡದೇ ವಿಮಾನ ನಿಲ್ದಾಣದಲ್ಲಿ ಕೂಡಿ ಹಾಕಿದರೆ ಎಷ್ಟು ಜನರಿಗೆ ಸೋಂಕು ಹರಡಬಹುದು. ನೀವೇ ನಿಮ್ಮ ಪ್ರಜೆಗಳ ಜೀವನವನ್ನು ತೊಂದರೆಗೆ ಸಿಲುಕಿಸುತ್ತಿದ್ದೀರ. ನಮ್ಮಲ್ಲಿ ಯಾರಿಗಾದರೂ ಸೋಂಕು ತಗುಲಿದರೆ ಅದಕ್ಕೆ ನೇರ ಕಾರಣ ಭಾರತ ಸರ್ಕಾರ ಹಾಗೂ ಏರ್ ಇಂಡಿಯಾ ಎಂದು ಪ್ರಯಾಣಿಕರು ಆಕ್ರೋಶವನ್ನು ಹೊರಹಾಕಿದ್ದಾಗಿ ವರದಿಗಳು ತಿಳಿಸಿದೆ.
ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಕುರಿತು ಟ್ವೀಟ್ ಮಾಡಿದ್ದು, ಇಟಲಿಯ ರೋಮ್ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯರ ಬಗ್ಗೆ ಇಂದು ಬೆಳಿಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ. ಭಾರತಕ್ಕೆ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಮಾಣೀಕರಣ ನೀಡಲು ವೈದ್ಯಕೀಯ ತಂಡಗಳನ್ನು ಕಳುಹಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆ ತರಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.